ಬೆಂಗಳೂರು: ಯಡಿಯೂರಪ್ಪ ಲಿಂಗಾಯತರೇ ಅಲ್ಲ, ಬಳೆಗಾರ ಶೆಟ್ಟರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಮತ್ತೆ ಯಡಿಯೂರಪ್ಪ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ ಎಂದಿದ್ದಾರೆ.
ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದರು. ಆದರೆ ಅವರು ವೀರಶೈವರು ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೆ, ಮೋಸ ಮಾಡಿದರು ಎಂದು ಯತ್ನಾಳ್ ಆರೋಪಿಸಿದರು.
ಬಿಜೆಪಿಯನ್ನು ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ ಎಂದು ಯತ್ನಾಳ್ ಹೇಳಿದರು.
ರೇಣುಕಾಚಾರ್ಯ ಯತ್ನಾಳ್ ಅವರನ್ನು ನಾಯಿ ನರಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಯಿಗಳಿಗೆ ನಿಯತ್ತು ಇದೆ. ಆದರೆ ಹಂದಿಗಳಿಗೆ ನಿಯತ್ತು ಇಲ್ಲ. ಅಂದು ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಗೋವಾಗೆ ಹೋಗಿ ಸಂಚು ಮಾಡಿದ್ದು ಇದೇ ರೇಣುಕಾಚಾರ್ಯ ಎಂದು ತಿರುಗೇಟು ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4