ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಭಾಗವಹಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ವಹಿಸಿದ್ದರು. ಮಾಜಿ ಸಚಿವ ಬಳ್ಳಾರಿ ಶ್ರೀರಾಮುಲು ಅವರು ಮಾತನಾಡಿ, “ವಾಲ್ಮೀಕಿ ಸಮುದಾಯದವರು ಪಕ್ಷಾತೀತವಾಗಿ ಸಮಾಜದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಭಿವೃದ್ಧಿಗೆ ಒತ್ತುಕೊಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು.
ಮಾಜಿ ಸಚಿವ ಹಾಗೂ ಹಾಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು, “ವಾಲ್ಮೀಕಿ ಸಮಾಜದಲ್ಲಿ ನಾಯಕತ್ವ ಹುಟ್ಟಿನಿಂದಲೇ ಇದೆ. ಆದರೆ ಜನರನ್ನು ಆಳುವಂತಹ ನಾಯಕರಾಗಲು ಶಿಕ್ಷಣವೇ ಪ್ರಮುಖ ಆಯುಧ. ಪ್ರತಿಯೊಬ್ಬರೂ ವಿದ್ಯಾಭ್ಯಾಸದಲ್ಲಿ ಶ್ರಮಿಸಬೇಕು” ಎಂದು ಸಲಹೆ ನೀಡಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, “ವಾಲ್ಮೀಕಿ ಸಮಾಜವು ಎಲ್ಲಾ ಸಮುದಾಯಗಳಂತೆ ಉತ್ತಮ ಸ್ಥಾನಕ್ಕೆ ಬೆಳೆಯಬೇಕು. ಯಾವುದೇ ದ್ವೇಷದ ಕೆಲಸಕ್ಕೆ ಮುಂದಾಗದೆ ಸಾಮರಸ್ಯದಿಂದ ನಡೆದುಕೊಳ್ಳಬೇಕು. ವಾಲ್ಮೀಕಿ ಮಹರ್ಷಿಗಳಿಗೆ ವಿಧಾನಸೌಧದ ಮುಂದೆ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಸಿದ್ದರಾಮಯ್ಯ ಹಾಗೂ ವಾಲ್ಮೀಕಿ ದಿನಾಚರಣೆಗೆ ರಜೆ ಘೋಷಿಸಿದ ಯಡಿಯೂರಪ್ಪರನ್ನು ಸ್ಮರಿಸಬೇಕು” ಎಂದು ಅಭಿಪ್ರಾಯ ಪಟ್ಟರು.
ಮಾಜಿ ಸಚಿವ ವೆಂಕಟರಮಣಪ್ಪ ಅವರು, “ನಾಯಕ ಸಮಾಜವು ಪ್ರೀತಿಯಿಂದ ಎಲ್ಲ ಸಮಾಜಗಳೊಂದಿಗೆ ಬೆರೆತು ಬೆಳೆಯಬೇಕು. ರಾಜಣ್ಣ ಅವರ ಪದವಿ ಕಳೆದುಹೋಗಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸಿದ್ದು ನೋವು ತಂದಿದೆ. ಆದರೂ ಸ್ನೇಹ-ಸೌಹಾರ್ದತೆಯಿಂದ ಮುಂದೆ ಸಾಗುತ್ತೇವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೊರೆ ರಾಜ ಜಯಚಂದ್ರ ಶಾಸಕ ಎಚ್ ವಿ ವೆಂಕಟೇಶ್, ಇಇ ಅನಿಲ್ ಕುಮಾರ್, ಇಇ ಹನುಮಂತರಾಯಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜಂಗಮಪ್ಪ, ಎಚ್.ತಿಮ್ಮಯ್ಯ, ಮಧುಸೂದನ್, ಉಪನ್ಯಾಸಕ ನಾಗರಾಜು, ಪುತ್ಥಳಿ ನಿರ್ಮಾತೃ ನವೀನ್ ಕುಮಾರ್, ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್ ರವಿ ಮುಖಂಡಗಳಾದ ಬ್ಯಾಡನೂರು ಶಿವು, ಕೆ.ರಾಂಪುರದ ಆನಂದ್, ರಂಗಮ್ಮ, ಶಿವಕುಮಾರ್, ಅಂಬಿಕಾ ರಮೇಶ್, ಎರ್ರಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC