ಶಿವಮೊಗ್ಗ : ಸತತ ಪ್ರಯತ್ನದಿಂದ ಫಲ ಲಭಿಸಲಿದೆ. ಯುವಕರು ಉದ್ಯೋಗ ಪಡೆಯುವಲ್ಲಿ ಹಾಗೂ ಸ್ವಯಂ ಉದ್ಯೋಗ ಆರಂಭಿಸುವಲ್ಲಿ ತಮ್ಮ ಪ್ರಯತ್ನ ನಿರಂತರವಾಗಿರಲಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ದೀನ್ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದ ಪಕ್ಕದಲ್ಲಿರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವಕರು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸದಾ ಗಮನಹರಿಸುವಂತೆ ಹಾಗೂ ದೇಶದ ಅಭ್ಯುದಯಕ್ಕಾಗಿ ಚಿಂತಿಸುವ ಸ್ವಭಾವವನ್ನು ಬೆಳೆಸಿಕೊಳ್ಳಲು, ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವಂತೆ ಅವರು ಸಲಹೆ ನೀಡಿದರು.
ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ಸದಸ್ಯ ಡಿ.ಎಸ್.ಅರುಣ್ ಅವರು ಮಾತನಾಡಿ, ಕೃತಕ ಬುದ್ದಿಮತ್ಯೆ ಇಂದಿನ ಯುವಕರ ಉದ್ಯೋಗದ ಸಾಧ್ಯತೆಗಳನ್ನು ಕಿತ್ತುಕೊಳ್ಳುವ ಆತಂಕವಿದೆ. ಇದನ್ನು ಹೋಗಲಾಡಿಸಲು, ಉದ್ಯೋಗಾವಕಾಶಗಳನ್ನು ಸೃಜಿಸಲು ಕೇಂದ್ರ ಚಿಂತನೆ ನಡೆಸಿದೆ ಎಂದವರು ನುಡಿದರು.
1991ರಲ್ಲಿಯೂ ಜಾಗತೀಕರಣ ಸೇರಿದಂತೆ ಇಂತಹ ಅನೇಕ ಸಮಸ್ಯೆ–ಸವಾಲುಗಳನ್ನು ಎದುರಿಸಿ, ದೇಶವು ಮುನ್ನಡೆ ಸಾಧಿಸಿದೆ. ಇಂತಹ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುವ ಶಕ್ತಿ ಭಾರತಕ್ಕಿದೆ ಎಂದ ಅವರು, ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.75ಲಕ್ಷ ಹುದ್ದೆಗಳ ಭರ್ತಿಗೆ ಸರ್ಕಾರ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದಾಗಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದರು.
ಅಲ್ಲದೇ ಖಾಸಗಿ ಕಂಪನಿಗಳನ್ನು ಆರಂಭಿಸುವಲ್ಲಿ ಸರ್ಕಾರ ಸಹಕಾರ ನೀಡಿದಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳು ದೊರೆಯಲಿವೆ ಎಂದ ಅವರು, ಇಂತಹ ಉದ್ಯೋಗ ಮೇಳಗಳ ಆಯೋಜನೆಯಿಂದ ದೊರೆಯುವ ಉದ್ಯೋಗಾವಕಾಶಗಳ ಲಾಭ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಸರ್ಕಾರದ ಕಡೆಗೆ ಮುಖಮಾಡದೇ ಸ್ವಯಂ ಉದ್ಯೋಗಾವಕಾಶಗಳ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಬೇಕು. ಎಲ್ಲಾ ಹಂತದ ಅಧಿಕಾರಿ-ಸಿಬ್ಬಂಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೊರತಾಗಿಯೂ ಅನೇಕರು ದೇಶ ಕಟ್ಟುವ ನಿಟ್ಟಿನಲ್ಲಿ ಕೈಜೋಡಿಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳು ತಮ್ಮ ಶ್ರಮದಿಂದ ಕೈಗಾರಿಕೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಒದಗಿಸಿದ್ದಾರೆ. ಸಿ.ಎಸ್.ಆರ್.ನಿಧಿಯನ್ನು ಉದಾರವಾಗಿ ನೀಡುವ ಮೂಲಕ ಅನೇಕ ಬದುಕಿಗೆ ಆಸರೆಯಾಗಿದ್ದಾರೆ ಎಂದರು.
ಉದ್ಯೋಗ ಮೇಳವನ್ನು ಇಂದಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಅವರ ಬದುಕಿಗೆ ನೆರವಾಗುವ ಸದುದ್ದೇಶದಿಂದ ಆಯೋಜಿಸಲಾಗಿದೆ. ಕೌಶಲ್ಯಾಭಿವೃದ್ಧಿಯಂತಹ ವಿಷಯಗಳು ಇಂದು ಪ್ರಸ್ತುತವಾಗಿದ್ದು ಹೆಚ್ಚಿನ ಮಾನ್ಯತೆ ಹೊಂದಿವೆ ಎಂದರು.
ವಿದ್ಯಾವಂತ ಯುವಕ-ಯುವತಿಯರು ತಮ್ಮ ನಿರೀಕ್ಷಿತ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಲ್ಲಿ ತಮ್ಮ ಊರು–ಕೇರಿಯನ್ನು ತೊರೆಯಲು ಮಾನಸಿಕವಾಗಿ ಸಿದ್ಧರಾಗಿ. ಭವಿಷ್ಯದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಿ. ಇದು ತಮ್ಮ ಜೀವನಾನುಭವ ವಿಸ್ತಾರಕ್ಕೂ ಸಹಕಾರಿ.
— ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಶಿವಮೊಗ್ಗ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಂದಿನಿ ಅವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


