ಚಾಮರಾಜನಗರ: ಚಾಮರಾಜನಗರ ದಸರಾ ಈ ಬಾರಿ ಮಂಕಾಗಿದ್ದು ಜನರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳು ಸೋತು ಹೋಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಆಯೋಜನೆ ಎಡವಟ್ಟಿನಿಂದ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಹೌದು…,ಅಪಾರ ನಿರೀಕ್ಷೆ ಹೊತ್ತು ಸಂಭ್ರಮದಿಂದ ಕಳೆದ 17 ರಂದು ಚಾಮರಾಜನಗರ ದಸರಾಗೆ ಚಾಲನೆ ಕೊಡಲಾಗಿತ್ತು , ಇಂದು ಶುಕ್ರವಾರ ಕೊನೆ ದಿನವಾಗಿದ್ದು ಇಷ್ಟೂ ದಿನವೂ ಹಗಲಿನ ಕಾರ್ಯಕ್ರಮಗಳಿಗತ್ತ ಜನರು ಸುಳಿಯುತ್ತಿಲ್ಲ. ಪ್ರಧಾನ ವೇದಿಕೆ, ಡಾ.ರಾಜ್ ಕುಮಾರ್ ರಂಗ ಮಂದಿರ, ಮಹಿಳಾ ಉತ್ಪನ್ನ ಮಾರಾಟ ಮೇಳದತ್ತ ಅಂದುಕೊಂಡಷ್ಟರ ಮಟ್ಟಿಗೆ ಜನರ ಭೇಟಿ ಈ ಬಾರಿ ಇಲ್ಲಾ.
2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದ ಹೆಚ್.ಎಸ್ ಮಹದೇವಪ್ರಸಾದ್ ದಶಕದ ಹಿಂದೆ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ಪ್ರಾರಂಭಿಸಿದರು. ಅವರ ಕಾಲದಲ್ಲಿ ಸ್ಥಳೀಯ ಕಲಾವಿದರ ಜೊತೆಗೆ ರಾಷ್ಟ್ರ ಹಾಗು ರಾಜ್ಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದರನ್ನು ಕರೆಸಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುವ ಮೂಲಕ ಈ ಭಾಗದ ಜನರಿಗೂ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದರು.
ಆದರೆ ಹೆಚ್.ಎಸ್ ಮಹದೇವ ಪ್ರಸಾದ್ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಚಾಮರಾಜನಗರ ದಸರಾ ರಂಗು ಕಳೆದುಕೊಳ್ಳುತ್ತಿದೆ. 2023ರ ಚಾಮರಾಜನಗರ ದಸರಾ ವೀಕ್ಷಿಸಿದವರಿಗೆ ಹಾಗೆ ಅನ್ನಿಸದೇ ಇರುವುದಿಲ್ಲ.


