ಬೆಂಗಳೂರು: ರಾಜ್ಯದಲ್ಲಿರುವ ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯ ಎಂಬವರು ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಅಭಿಪ್ರಾಯ ಕೇಳಿತ್ತು.
ಈ ಅರ್ಜಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ, ಬೆಂಗಳೂರಿನಲ್ಲಿ 72 ರೊಹಿಂಗ್ಯಾ ಮುಸ್ಲಿಮರು ವಾಸ ಮಾಡುತ್ತಿದ್ದು, ನಗರದ ವಿವಿಧೆಡೆಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವ ಯಾವುದೇ ಯೋಚನೆ ಇಲ್ಲ. ಅವರನ್ನು ಗಡಿಪಾರು ಮಾಡಲು ಕಾನೂನಿನಲ್ಲಿ ಕೂಡ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಜೊತೆಗೆ ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಗೆ ರಾಜ್ಯ ಬಿಜೆಪಿ ಸರ್ಕಾರ ಸಲಹೆ ನೀಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.