ಸರಗೂರು: ಪಟ್ಟಣದ ಜೈನ ಸಮಾಜದ 1008 ಅನಂತನಾಥ ತೀರ್ಥಂಕರರ ನೂತನ ಜಿನ ಚೈತ್ಯಾಲಯದ 131ನೇ ವಾರ್ಷಿಕ ಪೂಜಾ ಹಾಗೂ ಧಾಮಸಂಪ್ರೋಕ್ಷಣೆ ಮಹೋತ್ಸವವು ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಹೋತ್ಸವದ ಅಂಗವಾಗಿ ಜಿನ ಚೈತ್ಯಾಲಯದಲ್ಲಿ ಬೆಳಿಗ್ಗೆ ಅಗ್ರೋದಕ, ಕಳಶ ಸ್ಥಾಪನೆ, ಇಂದ್ರ ಪ್ರತಿಷ್ಠೆ ಹಾಗೂ ಕಂಕಣ ಧಾರಣೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಂಡವು. ನಂತರ ನಿತ್ಯ ಪೂಜಾವಿಧಿಗಳು ನಡೆದವು. ಇದೇ ವೇಳೆ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಸರಗೂರು ಪಟ್ಟಣಕ್ಕೆ ಮಂಗಳ ಪ್ರವೇಶ ಮಾಡಿದಾಗ, ಭಕ್ತರು ಭವ್ಯ ಮೆರವಣಿಗೆಯ ಮೂಲಕ ಜಿನ ಚೈತ್ಯಾಲಯಕ್ಕೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.
ಬಳಿಕ ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ ಹಾಗೂ 1008 ಅನಂತನಾಥ ತೀರ್ಥಂಕರರಿಗೆ ಬಿಂಬಶುದ್ಧಿ ಮತ್ತು ನವಕಳಶ ಪಂಚಾಮೃತ ಮಹಾಭಿಷೇಕ ಪೂಜೆಗಳು ನಡೆದವು. ಕಾರ್ಯಕ್ರಮದ ಪೂರ್ವಭಾವಿಯಾಗಿ ವಿವಿಧ ಕಲಶಗಳನ್ನು ಹರಾಜು ಮಾಡಲಾಗಿದ್ದು, ಭಕ್ತರು ಉತ್ಸಾಹದಿಂದ ಪಾಲ್ಗೊಂಡು ವಿಶೇಷ ಅಭಿಷೇಕ ಸೇವೆಯಲ್ಲಿ ಭಾಗಿಯಾದರು. ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹಾಗೂ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.
“ಜೈನ ಧರ್ಮವು ಅಹಿಂಸೆ, ಸತ್ಯ, ತ್ಯಾಗ ಮತ್ತು ಆತ್ಮಶುದ್ಧಿಯ ಮಾರ್ಗವನ್ನು ಬೋಧಿಸುತ್ತದೆ. ಮಾನವನ ಜೀವನದಲ್ಲಿ ಧರ್ಮದ ಮೌಲ್ಯಗಳು ನೆಲೆಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ಬೆಳೆಯುತ್ತದೆ. ಜಿನೇಂದ್ರ ಭಗವಂತರ ಆರಾಧನೆ ಆತ್ಮೋನ್ನತಿಗೆ ದಾರಿದೀಪವಾಗಿದ್ದು, ಯುವಪೀಳಿಗೆ ಧಾರ್ಮಿಕ ಸಂಸ್ಕಾರಗಳನ್ನು ಅಳವಡಿಸಿಕೊಂಡು ಸದಾಚಾರದ ಬದುಕನ್ನು ನಡೆಸಬೇಕು. ಸಮಾಜದ ಏಕತೆ ಮತ್ತು ಸೇವಾಭಾವದಿಂದ ಧರ್ಮದ ಉಳಿವು ಸಾಧ್ಯವಾಗುತ್ತದೆ.”— ಪೂಜ್ಯ ಸ್ವಾಮೀಜಿಗಳು
ಈ ಸಂದರ್ಭದಲ್ಲಿ ಸರಗೂರು ಜೈನ ಸಮಾಜದ ಅಧ್ಯಕ್ಷ ಎಸ್.ಬಿ. ನಾಗರಾಜು, ಕಾರ್ಯದರ್ಶಿ ಎಸ್.ಎನ್. ದೇವೇಂದ್ರಯ್ಯ, ಖಜಾಂಚಿ ನಿತಿನ್, ಗೌರವ ಅಧ್ಯಕ್ಷರಾದ ಎಸ್.ಬಿ. ಬ್ರಹ್ಮದೇವಯ್ಯ, ಎಸ್.ಬಿ.ಸತೀಶ್ ಕುಮಾರ್, ಎಸ್.ಎನ್. ಪದ್ಮಪ್ರಸಾದ್, ಪದ್ಮಪ್ರಭ, ಎಸ್.ಡಿ.ಬ್ರಹ್ಮದೇವ್, ಎಸ್.ಎಸ್.ಮಂಜುನಾಥ್ ಜೈನ್, ಮಹಾವೀರ ಜೈನ್, ಎಸ್.ಎಸ್. ಸೋಮಪ್ರಭ, ಎಸ್.ಬಿ. ಜಿವೇಂದ್ರಕುಮಾರ್, ಎಸ್.ಬಿ.ಸಮಂತ್, ಎಸ್.ಬಿ. ಗೊಮ್ಮಟರಾಜು, ಎಸ್.ಡಿ. ವಿಮಲ್ ಜೈನ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ರವಿ, ಹೀರೇಹಳ್ಳಿ ದೇವದಾಸ್, ಅನಂತಮತಿ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಸೇರಿದಂತೆ ಮಹಿಳಾ ಸಂಘದ ಪದಾಧಿಕಾರಿಗಳು, ಜೈನ ಸಮಾಜದ ಸದಸ್ಯರು ಹಾಗೂ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




