ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಶಿಕ್ಷಣ ಸಚಿವರಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಪ್ರಗತಿಯ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ ಅಂತ್ಯದೊಳಗೆ ನೀಡುವ ಗುರಿ ಇದೆ. ಅಕ್ಟೋಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.
ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಆಗಸ್ಟ್ ೭ ಕ್ಕೆ ಒಂದು ವರ್ಷ ಪೂರೈಸಿದ್ದೇನೆ. ಈ ಒಂದು ವರ್ಷದಲ್ಲಿ ಇಲಾಖೆಯಲ್ಲಿ ಸುಧಾರಣೆ, ಬದಲಾವಣೆ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿ, ಸಾಧನೆಯ ಪಟ್ಟಿಯನ್ನು ಜನರ ಮುಂದಿಟ್ಟಿದ್ದಾರೆ.
ಅನುದಾನಿತ ಶಾಲೆಗಳಲ್ಲಿ 2015ರ ಡಿಸೆಂಬರ್ ೩೧ರ ಪೂರ್ವದಲ್ಲಿ ಖಾಲಿಯಾಗಿರುವ ಬೋಧಕರ ಹುದ್ದೆಗಳ ಭರ್ತಿಗೂ ಅನುಮತಿ ನೀಡಲಾಗಿದೆ. 2ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಇದರಿಂದ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಅವರ ಸೇವಾನುಭವದ ಆಧಾರದ ಮೇಲೆ ಮುಂಬಡ್ತಿ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಹಾಗೆಯೇ ಕೌನ್ಸಿಲಿಂಗ್ ಮೂಲಕ ೨೩ ಸಾವಿರಕ್ಕೂ ಹೆಚ್ಚು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದರು.
೨ ಬಾರಿ ಟಿಇಟಿ ಪರೀಕ್ಷೆ ವರ್ಷಕ್ಕೆ ೨ ಬಾರಿ ಟಿಇಟಿ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಒಂದೇ ಟಿಇಟಿ ಪರೀಕ್ಷೆ ನಡೆಯಲಿದೆ. ಇದೇ ನವೆಂಬರ್ ೬ ರಂದು ಟಿಇಟಿ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದರು.
ಇಂಗ್ಲೀಷ್ ಕಲಿಕೆ:
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಇಂಗ್ಲೀಷ್ ಕಲಿಕೆ ತರಬೇತಿ ಆರಂಭಿಸುವ ಉದ್ದೇಶ ಇದ್ದು, ಮುಂದಿನ ದಿನಗಳಲ್ಲಿ ಹೊಸ ನೇಮಕಾತಿಯಿಂದ ಲಭ್ಯವಾಗುವ ಇಂಗ್ಲೀಷ್ ಶಿಕ್ಷಕರ ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಹಂತ ಹಂತವಾಗಿ ಇಂಗ್ಲೀಷ್ ಕಲಿಕಾ ತರಗತಿಯನ್ನು ಆರಂಭಿಸಲಾಗುವುದು ಎಂದರು.
ನೈತಿಕ ಶಿಕ್ಷಣ:
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಲ್ಲಿ ನೈತಿಕ ವಿಜ್ಞಾನ ತರಗತಿಗಳನ್ನು ಆರಂಭಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು. ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಇದೇ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳ ಕಟ್ಟಡ ಸಂರಕ್ಷಣೆ ಮತ್ತು ಅಗ್ನಿ ಸುರಕ್ಷತೆಯನ್ನು ಸರಳೀಕರಣಗೊಳಿಸಲಾಗಿದೆ ಎಂದರು.
ಶಾಲಾ ವಾಹನ:
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯಲು ಶಾಲಾ ವಾಹನ ಖರೀದಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಳ್ಳಲು ಅನುಮತಿಸಲಾಗಿದೆ. ೧ ರಿಂದ ೮ನೇ ತರಗತಿಯ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜತೆಗೆ ಮೊಟ್ಟೆ/ ಚಿಕ್ಕಿ/ ಬಾಳೆಹಣ್ಣು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಅತಿಥಿ ಉಪನ್ಯಾಸಕ ಗೌರವ ಸಂಭಾವನೆಯನ್ನು ೩ ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಅತಿಥಿ ಶಿಕ್ಷಕರ ಗೌರವ ಸಂಭಾವನೆಯ ೨ ಸಾವಿರ ರೂ. ಹೆಚ್ಚಳ ಮಾಡಲಾಗಿದ್ದು, ಬಿಸಿಯೂಟ ನೌಕರರ ಗೌರವ ಸಂಭಾವನೆಯನ್ನು ೧ ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ವರ್ಷ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ೮೧೧೦೧ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಾಷ್ಟ್ರೀ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾರಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಲಾಗಿದೆ. ಇಲಾಖೆಯ ಪ್ರಗತಿಗೆ ಬದ್ಧರಾಗಿ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz