ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 3,546 ಕ್ಯೂಸೆಕ್ ನೀರು ಹರಿದು ಬಂದಿದೆ. ನೀರಿನ ಮಟ್ಟ 130 ಅಡಿಗೆ ಏರಿಕೆಯಾಗಿ ಗುರುವಾರ ಸಂಜೆ 6: 45 ಗಂಟೆಗೆ ಕೋಡಿ ಹರಿದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಯಲುಸೀಮೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿರುವ ದೃಶ್ಯ ವೀಕ್ಷಿಸಲು ಜನರು ಕಾತರದಿಂದ ಕಾಯುತ್ತಿದ್ದರು. ವಿ.ವಿ.ಸಾಗರ ಜಲಾಶಯ ಸುಮಾರು 88 ವರ್ಷಗಳ ನಂತರ ಭರ್ತಿಯಾಗುತ್ತಿದ್ದು, ಕೋಡಿಯ ಮೂಲಕ ನದಿಗೆ ನೀರು ಹರಿಯಲಿದೆ.
ವಿವಿ ಸಾಗರ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಡ್ಯಾಂನ ಗರಿಷ್ಟ ಮಟ್ಟ ಸೆಪ್ಟೆಂಬರ್ 1ರಂದು ಸಂಜೆ ಗರಿಷ್ಠ 130 ಅಡಿಗೆ ಏರಿಕೆಯಾಗಿ ಭರ್ತಿಯಾಗಿದೆ. ಒಳಹರಿವು 4,564 ಕ್ಯೂಸೆಕ್ ಇದೆ. ಗರಿಷ್ಟ ಮಟ್ಟ 130 ಅಡಿ ತಲುಪಿದ್ದು, ಭರ್ತಿಯಾಗಿ ಕೋಡಿ ಹರಿದಿದೆ. ಹೆಚ್ಚುವರಿ ನೀರು ಕೋಡಿಯ ಮೂಲಕ ನದಿಗೆ ಹರಿಯಲಿದ್ದು, ಈಗಾಗಲೇ ನದಿಪಾತ್ರದ ಇಕ್ಕೆಲಗಳ ಹಾಗೂ ತಗ್ಗು ಪ್ರದೇಶದ ಜನಗಳಿಗೆ ತಮ್ಮ ಆಸ್ತಿ-ಪಾಸ್ತಿ, ಜಾನುವಾರುಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಲು ಪ್ರಕಟಣೆ ಹಾಗೂ ಪ್ರಚಾರದ ತಿಳುವಳಿಕೆ ನೀಡಲಾಗಿದೆ.
1933-34ರಲ್ಲಿ ಅಂದರೆ ಸುಮಾರು 88 ವರ್ಷಗಳ ನಂತರ ಡ್ಯಾಂ ಮತ್ತೆ ಕೋಡಿ ಬಿದ್ದಿದೆ. ನದಿಪಾತ್ರವನ್ನು ಜಂಗಲ್, ಜಾಲಿ ಇತ್ಯಾದಿಗಳಿಂದ ಮುಕ್ತಗೊಳಿಸಿ ಸುಗಮ ಹರಿವಿಗೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಅಧಿಕ ನೀರು ಬಂದಲ್ಲಿ ಡ್ಯಾಂನ ಕೆಳಭಾಗದ ಕೆ.ಕೆ ಅಣೆಕಟ್ಟು ಮೂಲಕ ಕಾಲುವೆಗಾಗಲಿ ಅಥವಾ ನದಿಗಾಗಲಿ ನೀರು ಗೇಟಿನ ಮೂಲಕ ಹೊರಬಿಡಲು ಅವಕಾಶವಿದ್ದು, ಅನುಮತಿಗಾಗಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಡ್ಯಾಂ ಹಿನ್ನೀರಿನ ಹತ್ತಿರದ ಕೋಡಿಯ ಬಳಿ ಜನ-ಜಾನುವಾರು ನೀರಿಗಿಳಿಯದಂತೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಕ್ಯಾಂಪ್ ವಿಶ್ವೇಶ್ವರಯ್ಯ ಜಲನಿಗಮದ ಭದ್ರಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್.ಚಂದ್ರಮೌಳಿ ಕೋರಿದ್ದಾರೆ.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz