ಸರಗೂರು: ಅಮಾಯಕ ಹಾಡಿ ಜನರ ಮೇಲೆ ಅರಣ್ಯ ಇಲಾಖೆ ಹಾಕಿರುವ ಸುಳ್ಳು ಮೊಕದ್ದಮೆಯನ್ನು ಖಂಡಿಸಿ, ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ಹಾಡಿ ಜನರೊಂದಿಗೆ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೊಳೆಯೂರು ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಪುಟ್ಟರಾಜು, ಹಾಡಿಯ 16 ಮಂದಿ ಮೇಲೆ ದೂರು ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಹಾಡಿ ಜನತೆ ಜಿಂಕೆಯನ್ನು ಕೊಂದು ತಿಂದಿದ್ದಾರೆ ಎನ್ನುವುದು ಅರಣ್ಯ ಇಲಾಖೆ ದೂರು.
ಆದರೆ ಹಾಡಿ ಜನತೆ ಜಿಂಕೆಯನ್ನು ಕೊಂದು ತಿಂದಿಲ್ಲ. ಕೆಬ್ಬೇಪುರ ಹಾಡಿ ಅರಣ್ಯದಂಚಿನಲ್ಲಿದ್ದು, ಜಿಂಕೆಯೊಂದು ಹಾಡಿಗೆ ಬಂದಿದೆ. ಹಾಡಿಯಲ್ಲಿದ್ದ ನಾಯಿಗಳು, ಜಿಂಕೆ ಮೇಲೆ ದಾಳಿ ನಡೆಸಿ ಕೊಂದು ತಿಂದಿವೆ. ಆದರೆ ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದ ಅರಣ್ಯಾಧಿಕಾರಿ ಪುಟ್ಟರಾಜು, ಹಾಡಿಯ 16 ಮಂದಿ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ಮೂವರನ್ನು ಬಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೇ 26 ರಂದು ಘಟನೆ ನಡೆದಿದೆ. ದೂರು ದಾಖಲಾದ ಅಂದಿನಿಂದ ಹಾಡಿ ಜನತೆ ಅರಣ್ಯ ಇಲಾಖೆಗೆ ಹೆದರಿಕೊಂಡು, ಹಾಡಿ ಬಿಟ್ಟು ಹೊರ ಹೋಗಿಬಿಟ್ಟಿದ್ದಾರೆ. ಈ ವಿಷಯವನ್ನು ಇಂದು ಮಧ್ಯಾಹ್ನ ಹಾಡಿ ಕೆಲವರು ತಮ್ಮ ಗಮನಕ್ಕೆ ತಂದರು.
ಕೂಡಲೇ ಅರಣ್ಯಾಧಿಕಾರಿ ಪುಟ್ಟರಾಜು ಅವರಿಗೆ ಕರೆ ಮಾಡಿದರೆ, ತಮ್ಮ ಕರೆಯನ್ನು ಸ್ವೀಕಾರ ಮಾಡಲಿಲ್ಲ. ನಂತರ ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಡಿಎಫ್ ಒ ಅವರಿಗೂ ಕರೆ ಮಾಡಿದರೆ ಅವರು ಕೂಡ ತಮ್ಮ ಕರೆಯನ್ನು ಸ್ವೀಕಾರ ಮಾಡುತ್ತಿಲ್ಲ. ಹಾಗಾಗಿ ಕಚೇರಿಯಲ್ಲೆ ಇಂದು ವಾಸ್ತವ್ಯ ಹೂಡಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಸಿ ಚಿಕ್ಕವೀರನಾಯಕ. ರವಿ, ಮುಖಂಡರಾದ ಪ್ರದೀಪ್ ಅರವಿಂದ್, ಭೀಮರಾಜು ಮತ್ತು ಹಾಡಿ ಜನತೆ ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


