ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಾಗನಾಯ್ಕನಹಟ್ಟಿ ಹೋಗುವ ರಸ್ತೆ ತೀರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧ ಪಟ್ಟ ವಾರ್ಡ್ ನ ನಗರಸಭೆ ಸದಸ್ಯರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗನಾಯ್ಕನಹಟ್ಟಿ ಹೋಗುವ ರಸ್ತೆ ಮಾತ್ರವಲ್ಲದೆ ಹಿರಿಯೂರು ತಾಲ್ಲೂಕಿನ ಪ್ರಖ್ಯಾತಿ ಪಡೆದಿರುವ ಹಳೇ ಕಡಲೆಕಾಯಿ ಮಂಡಿಯ ಒಳಗಡೆ ರಾಷ್ಟ್ರಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳವಾಗಿದ್ದು, ಇಲ್ಲಿನ ಕ್ರೀಡಾಂಗಣವು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಇನ್ನೂ ಕ್ರೀಡಾಂಗಣದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದರೂ, ಬೀದಿ ಬದಿ ವ್ಯಾಪಾರಿಗಳಿಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿರಿಯೂರು ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ಜನರು ಬೀದಿ ಬದಿ ವ್ಯಾಪಾರಸ್ಥರಿಂದ ಆಹಾರ ಖರೀದಿಸಿ ಸೇವಿಸಿದ ಬಳಿಕ ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಅಲ್ಲಲ್ಲೆ ಹಾಕುತ್ತಿದ್ದಾರೆ. ಇದರಿಂದಾಗಿ ನಾನಾ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಅಧಿಕಾರಿಗಳ ತೀವ್ರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಿರಿಯೂರು ನಗರದ ಸಂತೆ ಮೈದಾನದಲ್ಲಿ, ಮಳೆಯ ಪರಿಣಾಮ ನೀರು ನಿಂತು ವ್ಯಾಪಾರಕ್ಕೆ ಕೂಡ ತೊಂದರೆಯಾಗಿದ್ದು, ಗ್ರಾಹಕರು ಕೆಸರಿನಲ್ಲಿ ನಡೆಯುತ್ತಾ ಖರೀದಿ ಮಾಡಬೇಕಾದ ದುಸ್ಥಿತಿ ಕಂಡು ಬಂದಿದೆ.
ಎಲ್ಲ ಬೀದಿ ಬದಿ ವ್ಯಾಪಾರಿಗಳಿಂದ ಮಾರುಕಟ್ಟೆ ಶುಲ್ಕ ಪಡೆಯುವ ನಗರಸಭೆ, ಸರ್ವ ಋತುಗಳಲ್ಲಿ ಸಂತೆ ಸುಗಮವಾಗಿ ನಡೆಯಲು ಹಾಗೂ ನಮಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.
ನಮ್ಮಂತಹ ಬೀದಿ ಬದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ದಿನಕ್ಕಿಂತ ದಿನ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಆದರೂ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು, ಆಡಳಿತ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ಬೀದಿ ಬದಿ ವ್ಯಾಪಾರಸ್ಥರ ಗೋಳನ್ನು ಕೇಳುವವರೇ ದಿಕ್ಕಿಲ್ಲದಂತಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಯಾವುದೇ ರೀತಿಯಲ್ಲೂ ಸಹ ಸ್ಪಂದಿಸುತ್ತಿಲ್ಲ ಎಂದು ನಮ್ಮತುಮಕೂರು ಜೊತೆಗೆ ಬೀದಿ ವ್ಯಾಪಾರಸ್ತರು ನೋವು ತೋಡಿಕೊಂಡರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


