ಹಿರಿಯೂರು: ಪುರುಷರಿಗೆ ಸಮಾನವಾಗಿ ಮಹಿಳೆಯರು ಕರ್ತವ್ಯ ನಿರ್ವಹಿಸಲು ಸುರಕ್ಷಿತ ಹಾಗೂ ಸಾರ್ಥಕ ಸೇವೆ ಮಾಡಲು ಅನುಕೂಲಕರ ಕ್ಷೇತ್ರಗಳಲ್ಲಿ ಈ ಪೊಲೀಸ್ ಇಲಾಖೆಯು ಅಗ್ರಗಣ್ಯ ಸ್ಥಾನದಲ್ಲಿದೆ ಎಂಬುದಾಗಿ ನಗರಠಾಣೆ ಅಪರಾಧ ವಿಭಾಗದ ಉಪನಿರೀಕ್ಷಕಿಯಾದ ಪಿ ಎಸ್ ಐ ಅನುಸೂಯಮ್ಮ ಹೇಳಿದರು.
ಹಿರಿಯೂರು ನಗರದ ಪೊಲೀಸ್ ಠಾಣೆಯಿಂದ ಪದೋನ್ನತಿ ಹೊಂದಿ ಚಿತ್ರದುರ್ಗ ನಗರ ಸಂಚಾರಿ ಠಾಣೆಗೆ ವರ್ಗಾವಣೆಗೊಂಡ ಮಹಿಳಾ ಪೇದೆ ಮಂಜುಳಾ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮನ್ನು ಗುರುತಿಸಿಕೊಂಡಿದ್ದು, ಮಹಿಳಾ ಸಿಬ್ಬಂದಿಗೆ ಕೆಲವೊಂದು ಕ್ಷೇತ್ರಗಳಲ್ಲಿ ವಿನಾಕಾರಣ ಕಿರುಕುಳ ನೀಡುವ ಉದಾಹರಣೆಗಳನ್ನು ಸಹ ನೋಡಿದ್ದೇವೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಎಲ್ಲಾ ಹಂತದ ಸಿಬ್ಬಂದಿ, ಅಧಿಕಾರಿಗಳು ನಿರ್ಭೀತವಾಗಿ ಕಾರ್ಯ ನಿರ್ವಹಿಸುವ ಕ್ಷೇತ್ರವಾಗಿದೆ. ಕೌಟುಂಬಿಕ ಸೌಜನ್ಯ, ಕಿರುಕುಳ ಹಾಗೂ ಅಬಲೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪೋಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗೆ ಹೆಚ್ಚು ಅವಕಾಶ ಸಿಗುವ ಕಾರಣ ಇಲಾಖೆಯ ಸೇವೆಯನ್ನು ಆತ್ಮತೃಪ್ತಿಯಿಂದ ಮಾಡಬಹುದಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುಳಾರವರು, ಇಲಾಖೆಯ ಸೇವೆ ನನಗೆ ತೃಪ್ತಿ ತಂದಿದೆ. ಮಹಿಳಾ ಸಿಬ್ಬಂದಿಗೆ ನೀಡುವ ರಕ್ಷಣೆ ಮತ್ತು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ನಮಗಿರುವ ಸ್ವಾತಂತ್ರ್ಯ ಇಲಾಖೆಯ ಬಗ್ಗೆ ಇದ್ದ ಗೌರವವನ್ನು ಇಮ್ಮಡಿ ಮಾಡಿದೆ, ಅಲ್ಲದೆ ಈ ಪೊಲೀಸ್ ಕೆಲಸ ನಿರ್ವಹಿಸುವಲ್ಲಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲ ಪಿಎಸ್.ಐ ಅನಸೂಯಮ್ಮ ವಿಶ್ವನಾಥ್, ಉಮಾಪತಿ, ಎಎಸ್.ಐ ಬೋರನಾಯಕ, ಸಿಬ್ಬಂದಿ ಲತಾ, ಸುಧಾ, ರಾಘವರೆಡ್ಡಿ, ಪ್ರವೀಣ್ , ಚಂದ್ರಪ್ಪ, ಇಬ್ರಾಹಿಂ ಖಲೀಲ್ ಅನಿಲ್ ಕುಮಾರ್ಗಿ, ತಿಮ್ಮಣ್ಣ ,ಸುರೇಶ್ ನಾಯ್ಕ ಚಿದಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


