ಬಿಬಿಎಂಪಿಯಲ್ಲಿ ಮತ್ತೆ ಕಸದ ಮಾಫಿಯಾ ತಲೆ ಎತ್ತುತ್ತಿದೆ. ಕೂಡಲೇ ಮಾಫಿಯಾಗೆ ಕಡಿವಾಣ ಹಾಕಬೇಕು ಇಲ್ಲದಿದ್ದಲ್ಲಿ ಪ್ರತಿ ವರ್ಷ ಪಾಲಿಕೆಗೆ 300 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ರಮೇಶ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಹೊಸ ಗುತ್ತಿಗೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಟೆಂಡರ್‍ನಲ್ಲಿ ಇಂದೋರ್ ಮಾದರಿಯಲ್ಲಿ ಪ್ರತಿ ಕಾಂಪ್ಯಾಕ್ಟರ್‍ನ ಹಿಂಭಾಗದಲ್ಲಿ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಸಂಗ್ರಹಿಸಲು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಲೇ ಬೇಕು ಎಂಬ ಅಂಶವನ್ನು ಸೇರಿಸಲಾಗಿತ್ತು.
ಆದರೆ, ಗಾರ್ಬೇಜ್ ಮಾಫಿಯಾದ ಗುತ್ತಿಗೆದಾರರು ಲಾಭಿ ನಡೆಸಿ ಅಂತಿಮ ಕ್ಷಣದಲ್ಲಿ ಹಸಿ ಮತ್ತು ಒಣ ತ್ಯಾಜ್ಯಕ್ಕೆ ಪ್ರತ್ಯೇಕ ಕಾಂಪ್ಯಾಕ್ಟರ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಬಿಬಿಎಂಪಿ ಆರ್ಥಿಕ ವಿರೋಧಿ ಅಂಶವನ್ನು ಸೇರ್ಪಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಪಾಲಿಕೆಗೆ ಪ್ರತಿ ವರ್ಷ ಕನಿಷ್ಠ 300 ಕೋಟಿ ರೂ.ಗಳಷ್ಟು ಆರ್ಥಿಕ ಹೊರೆಯಾಗುತ್ತದೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಬಿಬಿಎಂಪಿಗೆ ಪ್ರತಿವರ್ಷ ಸಂಭವಿಸುವ 300 ಕೋಟಿ ರೂ.ಗಳ ನಷ್ಟ ಮತ್ತಷ್ಟು ಹೊರೆಯಾಗಲಿದೆ ಎಂಬ ಅಂಶವನ್ನು ರಮೇಶ್ ಅವರು ರಾಕೇಶ್ ಸಿಂಗ್ ಮತ್ತು ತುಷಾರ್ ಗಿರಿನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಆಡಳಿತಾಧಿಕಾರಿಗಳು ಮತ್ತು ಆಯುಕ್ತರು ಬಿಬಿಎಂಪಿಗೆ ಪ್ರತಿವರ್ಷ 300 ಕೋಟಿಗೂ ಹೆಚ್ಚು ನಷ್ಟ ಸಂಭವಿಸುವುದನ್ನು ತಪ್ಪಿಸಿ ಕೂಡಲೆ ಈ ಅವೈಜ್ಞಾನಿಕ ನೀತಿಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


