ಮಂಗಳೂರು ವಿಶ್ವವಿದ್ಯಾಲಯ ಅಧೀನದ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಇನ್ನೂ ತಣ್ಣಗಾಗಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ (ಟಿಸಿ) ಪಡೆಯಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ವಿ ವಿ ಕಾಲೇಜಿನಲ್ಲಿ ಇತ್ತೀಚೆಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ನಿಯಮಾವಳಿಗಳನ್ನು ಮಾಡಲಾಗಿತ್ತು. ಆ ಬಳಿಕ ಮಂಗಳೂರು ವಿ ವಿ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಮಂಗಳೂರು ವಿ ವಿ ಕಾಲೇಜಿನಲ್ಲಿ ೪೪ ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಇವರಲ್ಲಿ ೧೫ ಮಂದಿ ಹಿಜಾಬ್ ತೆಗೆದು ಕಾಲೇಜಿಗೆ ಬರಲು ನಿರಾಕರಿಸಿದ್ದರು.ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ಅವರಿಗೆ ಟಿಸಿ ನೀಡಲು ವ್ಯವಸ್ಥೆ ಮಾಡಲಾಗುವುದೆಂದು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದರು.
ಮಂಗಳೂರು ವಿವಿಯ ಹಂಪನಕಟ್ಟೆ ಕಾಲೇಜಿನ ಐದು ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಟಿಸಿ ಪಡೆಯಲು ಅಧಿಕೃತವಾಗಿ ಯಾರೂ ಅರ್ಜಿ ಸಲ್ಲಿಕೆ ಮಾಡಿಲ್ಲ: ಈ ಬಗ್ಗೆ ಈಟಿವಿ ಭಾರತಕ್ಕೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರು ಪ್ರತಿಕ್ರಿಯೆ ನೀಡಿದ್ದು, ಟಿಸಿ ಪಡೆಯುವ ಬಗ್ಗೆ ವಿದ್ಯಾರ್ಥಿನಿಯರು ಮಾತನಾಡಿದ್ದರು. ಆದರೆ ಯಾರು ಈವರೆಗೆ ಟಿಸಿ ಪಡೆಯಲು ಅರ್ಜಿ ನೀಡಿಲ್ಲ. ಇದೀಗ ಕಾಲೇಜಿನಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB