ಬೆಂಗಳೂರು : ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ 2012-13 ಮತ್ತು 2014-15ರಲ್ಲಿ ತಲಾ 5 ರಿಂದ 10 ಲಕ್ಷ ರೂ.ಗೆ ಶಿಕ್ಷಕರ ಹುದ್ದೆ ಮಾರಾಟ ಮಾಡಲಾಗಿದೆ ಎಂದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ.
ಉನ್ನತ ಮೂಲಗಳ ಪ್ರಕಾರ, ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಕೆಲ ಅಭ್ಯರ್ಥಿಗಳು 5 ರಿಂದ 10 ಲಕ್ಷ ರೂಪಾಯಿಗೆ ಲಂಚ ನೀಡಿದ್ದಾರೆ. ಈ ಬಗ್ಗೆ ಸಿಐಡಿ ವಶದಲ್ಲಿರುವ ಮಹಿಳಾ ಅಭ್ಯರ್ಥಿಯೊಬ್ಬರು, ಕೆಲಸ ಮಾಡಲು 15 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ ಎಂದು ತನಿಖೆಯ ವೇಳೆ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ತುಮಕೂರು, ವಿಜಯಪುರ ಹಾಗೂ ಕೋಲಾರ ಜಿಲ್ಲೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ದಾಖಲೆಗಳಿಂದ ಗೊತ್ತಾಗಿದೆ ಎನ್ನಲಾಗಿದೆ.
ಈ ಜಿಲ್ಲೆಯಲ್ಲಿ ಅಕ್ರಮವಾಗಿ ಹುದ್ದೆಗೆ ಆಯ್ಕೆಯಾಗಲು ಸಹ ಶಿಕ್ಷಕರು, ತಲಾ 5 ಲಕ್ಷದಿಂದ 10 ಲಕ್ಷ ನೀಡಿರುವುದು ಪತ್ತೆಯಾಗಿದೆ. ಇನ್ನು ಹಣವನ್ನು ಹಂತ ಹಂತವಾಗಿ ಪಾವತಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು, ಪ್ರಥಮ ದರ್ಜೆ ಸಹಾಯಕ ಒಬ್ಬರನ್ನು ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಹಗರಣ ಸಂಬಂಧ ಈವರೆಗೆ ಸಿಐಡಿ 11 ಶಿಕ್ಷಕರನ್ನು ವಶಕ್ಕೆ ತೆಗೆದುಕೊಂಡಿದೆ, ಕೆಲವು ಅಧಿಕಾರಿಗಳು ಸಹ ಸಿಐಡಿ ವಶದಲ್ಲಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy