ಕೊರಟಗೆರೆ: ಪ್ರತಿ ತಿಂಗಳ 3ನೇ ಶನಿವಾರದಂದು ಸರ್ಕಾರದ ಅದೇಶದಂತೆ ಆಯ್ದ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಗ್ರಾಮಸ್ಥರಿಗೆ ಎಲ್ಲಾ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಸವಲತ್ತು ಮತ್ತು ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ನವಿಲುಕುರಿಕೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವಿಲುಕುರಿಕೆ ಗ್ರಾಮ ವಾಸ್ತವ್ಯದಲ್ಲಿ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಹಾಜರಾಗಿ, ಇಲಾಖೆಯ ವಿವಿಧ ಮಾಹಿತಿಗಳನ್ನು ಹಂಚಿಕೊಂಡು, ಜನರ ಸಮಸ್ಯೆಗಳು ಅಧಿಕಾರಿಗಳ ಮಟ್ಟದಲ್ಲೇ ಪರಿಹರಿಸಲು ಸಾಧ್ಯ ಇದ್ದರೆ ಇಲ್ಲೇ ಪರಿಹರಿಸಿಕೊಳ್ಳಬಹುದು. ದೊಡ್ಡ ಸಮಸ್ಯೆಗಳನ್ನು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ, ಶಾಸಕರಿಗೆ , ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಚುನಾವಣೆಯಲ್ಲಿ ಮತ ಹಕ್ಕು ಪಡೆದಿರುವ ಜನರು ಈಗ ತಮ್ಮ ಅಧಾರ್ ಕಾರ್ಡ್ ಗೆ ಚುನಾವಣೆ ಗುರುತಿನ ಚೀಟಿಯನ್ನು ಲಿಂಕ್ ಮಾಡಲೇಬೇಕಿದೆ ಹಾಗೂ ಸರ್ಕಾರದ ಪಿಂಚಣಿದಾರರು ತಮ್ಮ ಪಿಂಚಣಿ ಆದೇಶ ಪತ್ರ, ಆಧಾರ್ ಮತ್ತು ಬ್ಯಾಂಕ್ ಪಾಸ್ ಬುಕ್ ನಕಲುಗಳನ್ನು ಲಿಂಕ್ ಮಾಡಿಸಬೇಕು. ಪಿಂಚಣಿದಾರರು ಹಲವು ವರ್ಷಗಳಿಂದ ಅಂಚೆ ಕಛೇರಿಯಿಂದ ಸರಿಯಾಗಿ ಪಿಂಚಣಿ ಬಾರದಿರುವುದು ಮತ್ತು ಬರುವ ಸ್ವಲ್ಪ ಹಣದಲ್ಲಿ ಕೆಲವರು ಕಡಿತಗೊಳಿಸಿ ನೀಡುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರದ ಆದೇಶದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸರ್ಕಾರದ ಸವಲತ್ತು ಮತ್ತು ಸೌಲಭ್ಯಗಳನ್ನು ಗ್ರಾಮಸ್ಥರಿಗೆ ವಿವರಿಸಿದರು.
ಗ್ರಾಮ ವಾಸ್ತವ್ಯದಲ್ಲಿ ಗ್ರೇಡ್ 2 ತಹಶೀಲ್ದಾರ್ ನರಸಿಂಹಮೂರ್ತಿ, ಕೃಷಿ ಅಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿ ಸುರೇಶ್, ಸಿ.ಡಿ.ಪಿ.ಓ. ಅಂಬಿಕಾ, ಪಶುವೈದ್ಯಾಧಿಕಾರಿ ಸಿದ್ದನಗೌಡ, ಸಮಾಜಕಲ್ಯಾಣಾಧಿಕಾರಿ ಉಮಾದೇವಿ, ಜಿಲ್ಲಾ ಪಂಚಾಯತ್ ಎ.ಇ.ಇ ರವಿಕುಮಾರ್, ಭೂಮಾಪನಾಧಿಕಾರಿ ರುದ್ರೇಶ್, ಹಿಂದುಳಿದ ವರ್ಗಗಳ ಅಧಿಕಾರಿ ಅನಂತರಾಜು ,ತಾಲೂಕು ವೈದ್ಯಾಧಿಕಾರಿ ವಿಜಯ್ ಕುಮಾರ್, ಗ್ರಾಮ ಪಂಚಾಯತಿ ಪಿಡಿಓ ಮಂಜುಳ , ಅಧ್ಯಕ್ಷೆ ರತ್ನಮ್ಮ, ಉಪಾದ್ಯಕ್ಷೆ ರಾಗಿಣಿ, ಸದಸ್ಯರುಗಳಾದ ಗೀತಾ, ಶೈಲಜಾ, ಗಿರಿಜಾ, ಸಿ.ಡಿ.ಪ್ರಭಾಕರ್, ಕಂದಾಯ ಅಧಿಕಾರಿಗಳಾದ ಎ.ಜಿ.ರಾಜು, ಅಮ್ಜದ್ ಸೇರಿದಂತೆ ಗ್ರಾಮ ಲೆಕ್ಕಿಗರು, ಸಹಾಯಕರು ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy