ಕೂಲಿನಾಲಿ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು ಬಂಧಿಸುವ, ‘ಉತ್ತಮರು’ ಎಂದು ಕರೆಸಿಕೊಳ್ಳುತ್ತಿರುವ ಸಾಮಾಜಿಕ ಮುಖ್ಯವಾಹಿನಿಯ ಸಮುದಾಯಗಳ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಬುಡಕಟ್ಟು ಅಲೆಮಾರಿ ಸಮುದಾಯಗಳನಿರುಪದ್ರವಿ ಮುಗ್ಧ ಜನರನ್ನು ಇಲಿ-ತೋಡಗಳಂತೆಯೇ ಬೇಟೆಯಾಡುವ ಕಿರಾತಕ ವ್ಯವಸ್ಥೆಯನ್ನು ‘ಜೈ ಭೀಮ್’ ಸಿನಿಮಾ ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ.
‘ಒಬ್ಬನ ಮೇಲೆ ಒಂದೇ ಒಂದು ಕೇಸು ಹಾಕಬೇಕಂತಾ ಏನು ಕಾನೂನಿದೆಯಾ? ತಲೆಗೆ ಎರಡ್ಮೂರು ಕೇಸು ಹಾಕಿ ಒದ್ದು ಒಳಕ್ಕೆ ಹಾಕಿರಿ’ ಎಂದು ಶೋಷಿತ ಬುಡಕಟ್ಟು ಸಮುದಾಯಗಳ ಜನರ ಮೇಲೆ ಕಲ್ಪಿತ ಅಪರಾಧಗಳನ್ನು ಹೊರಿಸಿ ಜೈಲಿಗೆ ನೂಕುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಆಳುವ ವರ್ಗಗಳ ಪಾರಂಪರಿಕ ರೂಢಿಗತ ವ್ಯವಸ್ಥೆಯ ವಿರುದ್ಧ ಸಂವಿಧಾನದತ್ತವಾದ ಆಧುನಿಕ ಕಾನೂನಿನ ಅಸ್ತ್ರದ ಮೂಲಕ ಹೋರಾಡುವ ನ್ಯಾಯವಾದಿಯ ಪಾತ್ರದಲ್ಲಿ ಕಲಾವಿದ ಸೂರ್ಯ ನಮ್ಮ ಗಮನ ಸೆಳೆಯುತ್ತಾರೆ.
ಬುಡಕಟ್ಟು ಸಮುದಾಯಗಳ ಮಾದರಿ ವ್ಯಕ್ತಿತ್ವಗಳಾಗಿ ಕೆಂಚರಾಜ- ಸಣ್ಣಮ್ಮ- ಈರಪ್ಪ – ಮಂಜಪ್ಪ – ಸಣ್ಣಮ್ಮನ ಮಗಳು ಮುಂತಾದ ಪಾತ್ರಗಳು ಹಾಗೂ ಪೊಲೀಸ್ ತನಿಖಾಧಿಕಾರಿ ಪರಮೇಶ್ವರಪ್ಪನ ಪಾತ್ರದಲ್ಲಿ ಪ್ರಕಾಶ್ ರಾಜ್ ಅವರು ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ.
ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿರುವ ಉತ್ತರ ಭಾರತದ ಮಾರ್ವಾಡಿಗಳ ರಾಜಕೀಯ ಹುನ್ನಾರವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ನಿರ್ದೇಶಕ ಜ್ಞಾನವೇಲ್ ಅವರು ಪೊಲೀಸ್ ತನಿಖಾಧಿಕಾರಿ ಪರಮೇಶ್ವರಪ್ಪ (ಪ್ರಕಾಶ್ ರಾಜ್) ನ ಕೈನಿಂದ ಹಿಂದಿ ಮಾತನಾಡುವ ಮಾರ್ವಾಡಿಯ ಕೆನ್ನೆಗೆ ಪಟೀರೆಂದು ಬಾರಿಸುತ್ತಾ, ‘ತಮಿಳಿನಲ್ಲಿ (ಕನ್ನಡದಲ್ಲಿ ) ಮಾತಾಡು’ ಎಂದು ಜಬರಿಸುವ ಮೂಲಕ
ದ್ರಾವಿಡ ಭಾಷಾ ಚಳವಳಿಯನ್ನು ಸಾಂಕೇತಿಕವಾಗಿ ವ್ಯಂಜಿಸಿದ್ದಾರೆ.
ಚಲನಚಿತ್ರದ ಆರಂಭದಲ್ಲಿ ಪರಿಸರದ ಮಧ್ಯದಲ್ಲಿ ಗುಬ್ಬಚ್ಚಿಗಳೊಂದಿಗೆ ಗುಬ್ಬಿಮರಿಯಂತೆ ಸ್ವಚ್ಛಂದವಾಗಿ ಚಿಣ್ಣಾಟವಾಡಿಕೊಂಡಿದ್ದ ಸಣ್ಣಮ್ಮ ಮತ್ತು ಕೆಂಚರಾಜನ ಚಿಕ್ಕ ಮಗಳು ಅನಕ್ಷರಸ್ಥೆಯಾಗಿ ಬನದ ಮಗುವಾಗಿ ಕಾಣಿಸುತ್ತಾಳೆ. ಇಂತಹ ಬುಡಕಟ್ಟು ಮಕ್ಕಳಿಗೆ ಅಕ್ಷರ ಕಲಿಸುವ ಯುವ ಟೀಚರಮ್ಮ ಒಬ್ಬಳು ಶಾಲೆ ತೆರೆದು ಅಕ್ಷರದ ಜ್ಞಾನ ಮತ್ತು ಕಾನೂನುಗಳ ಅರಿವು ನೀಡಲು ಬರುತ್ತಾಳೆ. ಪೊಲೀಸರ ಕ್ರೌರ್ಯಕ್ಕೆ ಸಿಲುಕಿ ಲಾಕಪ್ ಡೆತ್ ನಿಂದ ಸಣ್ಣಮ್ಮನ ಮಗಳು ತನ್ನ ತಂದೆಯನ್ನು (ಚಿಕ್ಕರಾಜ) ಕಳೆದುಕೊಂಡ ಬಳಿಕ ಆ ಎಳೆಬಾಲಕಿ ತನ್ನ ತಾಯಿ (ಸಣ್ಣಮ್ಮ)ನ ಆಶ್ರಯಕ್ಕೆ ಬರುತ್ತಾಳೆ. ಲಾಕಪ್ ನಲ್ಲಿ ತನ್ನ ಗಂಡನನ್ನು ಹೊಡೆದು ಸಾಯಿಸಿದ ಪೊಲೀಸರು ಒಡ್ಡಿದ ಹಣದ ಆಮಿಷಕ್ಕೆ ಬಲಿಯಾಗದ ಸಣ್ಣಮ್ಮ ಕೂಲಿನಾಲಿ ಮಾಡಿಯೇ ಮಕ್ಕಳನ್ನು ಸಲಹುವೆನೇ ಹೊರತು ತನ್ನ ಗಂಡನನ್ನು ಕೊಂದ ಕೊಲೆಪಾತಕರ ಹಣದಿಂದ ಅನ್ನ ತಿನ್ನಲಾರೆವೆಂದು ಹೇಳುವ ಮೂಲಕ ದುಡಿದು ಬದುಕುವ ತಳಸಮುದಾಯಗಳ ಹೆಣ್ಣೊಬ್ಬಳ ಸ್ವಾಭಿಮಾನದ ಸಂಕೇತವಾಗಿ ಕಾಣಿಸುತ್ತಾಳೆ.
ಇಂತಹ ಸಣ್ಣಮ್ಮನ ಮಗಳು ಸಿನಿಮಾದ ಕೊನೆಯಲ್ಲಿ ನ್ಯಾಯವಾದಿ ಚಂದ್ರು (ಸೂರ್ಯ) ಪತ್ರಿಕೆ ಓದುತ್ತಾ ಸೋಫಾದ ಮೇಲೆ ಕುಳಿತಿರುವಾಗ ಎದುರು ಸೋಫಾದಲ್ಲಿ ಕುಳಿತುಕೊಂಡು ಪೇಪರ್ ಓದಲು ಅಂಜಿಕೆಯಿಂದಲೇ ಮುಂದಾಗುತ್ತಾಳೆ. ನ್ಯಾಯವಾದಿ ಚಂದ್ರು ಆ ಎಳೆಬಾಲಕಿಗೆ ಯಾವುದೇ ಅಂಜಿಕೆ ಇರಿಸಿಕೊಳ್ಳದೆ ನಿರಾತಂಕವಾಗಿ ಪತ್ರಿಕೆ ಓದುವಂತೆ ಕಣ್ಣಿನಲ್ಲಿಯೇ ಸೂಚಿಸುತ್ತಾನೆ. ಶೋಷಿತ ಸಮುದಾಯದ ಆ ಹೆಣ್ಣುಮಗಳು ಕಾಲು ಮೇಲೆ ಕಾಲು ಹಾಕಿ ದಿಟ್ಟತನದಿಂದ ಪೇಪರ್ ಹಿಡಿದು ಓದತೊಡಗುತ್ತಾಳೆ. ಚಂದ್ರು ಕನಸುವುದು ಇಂತಹ ಎಚ್ಚೆತ್ತ ಅಕ್ಷರಸ್ಥ ಹೊಸ ಪೀಳಿಗೆಯೊಂದು ಶೋಷಿತ ಸಮುದಾಯಗಳಿಂದ ಮೂಡಿಬರಲಿ ಎಂಬುದು. ಇದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಕೂಡಾ ಆಗಿರುವಂತೆ ನಮ್ಮೆಲ್ಲರ ಹಂಬಲವೂ ಆಗಿದೆ ಎಂಬುದನ್ನು ನಿರ್ದೇಶಕ ಜ್ಞಾನವೇಲ್ ಸಮರ್ಥವಾಗಿ ಮನಗಾಣಿಸಿದ್ದಾರೆ. ಈ ನಿಟ್ಟಿನಲ್ಲಿ ‘ಜೈ ಭೀಮ್’ ಎಂದುಗ ಚಲನಚಿತ್ರಕ್ಕೆ ಹೆಸರು ಕೊಟ್ಟಿರುವುದು ಅನ್ವರ್ಥಕವಾಗಿದೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174