ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡ ಹೊಸಹಳ್ಳಿಯಲ್ಲಿ ಅಶೋಕ್ ಲೈಲ್ಯಾಂಡ್ ಟೆಂಪೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ವಾಹನ ಸವಾರರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಟೆಂಪೋ ಚಾಲಕನ ಸೊಂಟ ಮುರಿತಕ್ಕೊಳಗಾಗಿದ್ದು, ಗಾಯಾಳುಗಳನ್ನ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ, ತಕ್ಷಣದಲ್ಲಿ ಆ್ಯಂಬುಲೆನ್ಸ್ ಆಗಮಿಸಿಲ್ಲ, ಕರೆ ಮಾಡಿ 30 ನಿಮಿಷಗಳ ಬಳಿಕ ಆ್ಯಂಬುಲೆನ್ಸ್ ಆಗಮಿಸಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಈ ಭಾಗದಲ್ಲಿ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಠಾಣೆ ಪಿಎಸ್ ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಿಂದಾಗಿ ಸೃಷ್ಟಿಯಾಗಿದ್ದ ಟ್ರಾಫಿಕ್ ಜಾಮ್ ನ್ನು ಪೊಲೀಸರು ಇದೇ ವೇಳೆ ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.
ವರದಿ: ಅಬೀದ್ ಮಧುಗಿರಿ