ತುಮಕೂರು: ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಅತಿ ಅಗತ್ಯವಾಗಿರುವಂತಹ ನಾಟಿ ಹಸುವಿನ ಸಗಣಿ ಮತ್ತು ಗಂಜಲ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲೆಂದು ಆಯ್ದ 50 ಜನ ಕೃಷಿಕರಿಗೆ ಒಂದು ನಾಟಿ ಹಸು ಮತ್ತು ಹೋರಿ ಕರುವನ್ನು ದಾನವಾಗಿ ನೀಡಲಾಗುತ್ತಿದೆ ಎಂದು ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ತಿಳಿಸಿದ್ದಾರೆ.
ತುಮಕೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯವಾಗಿ ವಿಷಮುಕ್ತವಾಗಿಸುವ ನಿಟ್ಟಿನಲ್ಲಿ ಸುಭಾಷ್ ಪಾಳೆಕಾರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ಗೋ ದಾನ ಕಾರ್ಯಕ್ರಮವನ್ನು ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರ ಸಮುದಾಯಭವನದಲ್ಲಿ ಅಕ್ಟೋಬರ್ 3ರಂದು ಆಯೋಜಿಸಲಾಗಿದೆ ಎಂದರು.
ಬಿಜೆಪಿ ರೈತಮೋರ್ಚಾ ವತಿಯಿಂದ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಈ ವೇಳೆ ರೈತ ಸಮುದಾಯವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಗೋವುಗಳನ್ನು ದಾನವಾಗಿ ನೀಡಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುವಂತಹ ಚಿಂತನೆ ಗೊಂದಲಾಗಿದೆ ಎಂದು ಹೇಳಿದರು.
ರೈತರ ಆದಾಯ ದ್ವಿಗುಣಗೊಳ್ಳಬೇಕು. ರೈತರ ಅರ್ಥಿಕ ಸ್ಥಿತಿ ಸುಧಾರಣೆ ಯಾಗುವುದರ ಜೊತೆಗೆ, ಜನತೆಗೆ ವಿಷಮುಕ್ತ ಆಹಾರ ದೊರೆಯಬೇಕೆಂಬ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರೈತರ ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ಈ ನೈಸರ್ಗಿಕ ಖುಷಿ ಕೂಡ ಪ್ರಮುಖವಾದು ದಾಗಿದೆ ಈ ಮೂಲಕ ರೈತ ಸಮುದಾಯದ ಬದುಕು ಸಮೃದ್ಧಿಯಾಗಬೇಕು ಆರ್ಥಿಕವಾಗಿ ಸದೃಢವಾಗಬೇಕು ಎಂಬ ನಿಲುವು ಹೊಂದಲಾಗಿದೆ ಎಂದು ಹೇಳಿದರು. ದೇಶದ ಜಿಡಿಪೀಗೆ ಕೃಷಿಯ ಪಾಲು ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ಕೃಷಿ ಬಂಡವಾಳವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ರೈತ ಉತ್ಪಾಧಕ ಸಂಘಗಳ ರಚನೆ ಮಾಡುವುದು,ಆ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ಮಾರಾಟದ ಮೂಲಕ ರೈತನನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಹಾಗಾಗಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಾವಯವ ಕೃಷಿ ಸೇರಿದಂತೆ ಹಲವಾರು ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳನ್ನು ರೈತರಿಗೆ ಪುನರ್ ಮನನ ಮಾಡುವಂತಹ ಕೆಲಸವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರರ ಸಭಾಭವನದಲ್ಲಿ ಆಯೋಜಿಸಲಾಗುತ್ತಿರೋ ‘ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ಕೃಷಿ ಪದ್ದತಿ’ ಕಾರ್ಯಾಗಾರವನ್ನು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶಗೌಡ, ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಓಬಿಸಿ ಕಾರ್ಯಕಾರಿಣಿಯ ಸದಸ್ಯ ಎಸ್.ಪಿ.ಚಿದಾನಂದ್, ಭಾರತೀಯ ಕೃಷಿ ಪದ್ದತಿಯಲ್ಲಿ ಗೋವುಗಳಿಗೆ ಹೆಚ್ಚಿನ ಪ್ರಾಧ್ಯಾನತೆ ಇದೆ.ಆದರೆ ಆಧುನಿಕ ಕೃಷಿ ಪದ್ದತಿಯ ಹೆಸರಿನಲ್ಲಿ ಗೋ ಆಧಾರಿತ ಕೃಷಿ ಮರೆತಿದ್ದರ ಪರಿಣಾಮ ಇಂದು ಕೃಷಿ ಲಾಭದಾಯಕವಲ್ಲ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ.ಮರಳಿ ಜನರನ್ನು ಗೋ ಆಧಾರಿತ ಕೃಷಿಗೆ ತರುವ ಮೂಲಕ ಕೃಷಿಯ ಬಂಡವಾಳವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ದತಿಯನ್ನು ಅಳವಡಿಸಿ ಕೊಳ್ಳಲು ಪ್ರೇರೆಪಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಆಸಕ್ತರಿಗೆ ಒಂದು ನಾಟಿ ಹಸು ಮತ್ತು ಹೊರಿಯನ್ನು ದಾನವಾಗಿ ನೀಡಿ, ಅದರ ಸಗಣಿ ಮತ್ತು ಗಂಜಲವನ್ನು ಬಳಸಿಕೊಂಡು ಜೀವಾಮೃತವನ್ನು ತಯಾರಿಸುವುದು,ಅದರ ಉಪಯೋಗ ಕುರಿತಂತೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆಯ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ.ಟಿ.ಆರ್.ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ರೈತರು ಪಾಲ್ಗೊಂಡು ಉಪಯೋಗ ಪಡೆಯಬೇಕೆಂದರು.
ಕಾರ್ಯಕ್ರಮ ಆಯೋಜಕರಾದ ಬಿಜೆಪಿ ರೈತಮೋರ್ಚಾದ ವಿದ್ಯಾ.ವಿ.ಎಂ.ಮಾತನಾಡಿ, ರಾಸಾಯನಿಕ ಮುಕ್ತ ಆಹಾರ ಜನರಿಗೆ ದೊರೆಯಬೇಕು.ಆ ಮೂಲಕ ರೋಗ ರಹಿತ ಜೀವನ ಕ್ರಮ ನಮ್ಮದಾಗಬೇಕೆಂಬ ಆಶಯದೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನದ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ ಟಿ.ಆರ್.ಉಪಸ್ಥಿತರಿದ್ದರು.