ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಪ್ಲಿನ ಮೇಲೆ ನಿರ್ಬಂಧ ಹೇರುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆಯನ್ನು ಪ್ರತಿ ಟನ್ ಗೆ 800 ಡಾಲರ್‌ಗೆ ನಿಗದಿಪಡಿಸಲಾಗಿದೆ. ಈ ಬೆಲೆಯು ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಬೆಲೆ ನಿಯಂತ್ರಣದ ಜತೆಗೆ ಈರುಳ್ಳಿ ದೇಶೀಯವಾಗಿ ಲಭ್ಯವಾಗುವಂತೆ ಮಾಡಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ.
ದೇಶದಲ್ಲಿ ಈರುಳ್ಳಿ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಕಳೆದ ವಾರದಲ್ಲಿ ಬೆಲೆಗಳು ದುಪ್ಪಟ್ಟಾಗಿದೆ. ಇದರಿಂದ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚಿನವರೆಗೂ ಒಂದು ಕಿಲೋ ಈರುಳ್ಳಿ ಬೆಲೆ 20 ರೂ.ಯಿಂದ 30 ರೂ.ಇತ್ತು. ಈಗ ಈರುಳ್ಳಿ ಬೆಲೆ ಕೆಜಿಗೆ 40ರಿಂದ 50 ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆಯ ಮೂಲಗಳು ವಿಶ್ಲೇಷಿಸುತ್ತಿವೆ. ಮುಂಗಾರು ತಡವಾಗಿ ಈ ಬಾರಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.


