ಬೆಂಗಳೂರು: “ಕೆಆರ್ ಎಸ್ ಒಳಹರಿವು ಶೂನ್ಯಕ್ಕೆ ತಲುಪಿದೆ. ನಮ್ಮ ಹತ್ತಿರ ತಮಿಳುನಾಡಿಗೆ ಹರಿಸಲು ನೀರಿಲ್ಲ, ನೀರು ಬಿಡುವ ಶಕ್ತಿಯೂ ನಮ್ಮಲ್ಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಗಿರಿನಗರದ ವೀರಭದ್ರನಗರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಬಸ್ ಗಳು ಸುಟ್ಟುಹೋದ ಸ್ಥಳಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸ್ಸಿನ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು.
“ಕೆಆರ್ ಎಸ್ ಅಣೆಕಟ್ಟೆಗೆ ಕಾವೇರಿ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಕೆಆರ್ ಎಸ್, ಕಬಿನಿಯಿಂದ ನೈಸರ್ಗಿಕವಾಗಿ 815 ಕ್ಯೂಸೆಕ್ ನೀರು ಹರಿದು ಹೋಗುತ್ತಿದ್ದು, ರಾಜ್ಯದ ಕಾವೇರಿ ಕೊಳ್ಳದಲ್ಲಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ಕುಡಿಯುವ ನೀರನ್ನು ಉಳಿಸಿಕೊಳ್ಳಬೇಕು. ದೇವರ ಮೊರೆ ಹೋಗೋಣ, ಮಳೆ ಬೀಳಲಿ, ನೀರು ಕೆಳಗಡೆಗೆ ಹರಿಯಲಿ. ಈಗ ನಮ್ಮ ಬಳಿಯಂತೂ ನೀರಿಲ್ಲ.
ಕಾವೇರಿ ನೀರಿನ ವಿಚಾರವಾಗಿ 89 ನೇ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC), ನ.1 ರಿಂದ ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸ್ಸು ಮಾಡಿದೆ.”


