ತುಮಕೂರು: ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಣವನ್ನು ಕಲಿಯುತ್ತಿದ್ದು, ವಿಶೇಷವಾಗಿ ಚಿತ್ರಕಲಾ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ತಂದೆ ಮಕ್ಕಳಂತೆ ಹಾಗೆಯೇ ಇಲ್ಲಿಯ ವಿದ್ಯಾರ್ಥಿಗಳು ಸಹೋದರರಂತೆ ಪ್ರೀತಿ ವಾತ್ಸಲ್ಯದ ವಾತಾವರಣವನ್ನು ಕಾಪಾಡಿಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆಯುವ ಮೂಲಕ ಉತ್ತಮ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಮ್ಮ ಕಾಲೇಜಿಗೆ ಹಳೆ ವಿದ್ಯಾರ್ಥಿಗಳ ಸಂಘ ಸದಾ ಬೆಂಬಲವಾಗಿ ನಿಂತಿದೆ. ಆ ಸಂಘದ ಪ್ರತಿಯೊಬ್ಬ ಕಾರ್ಯಕರ್ತನೂ ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಖುಷಿಯ ಸಂಗತಿ. ಇಂದಿನ ವಿದ್ಯಾರ್ಥಿಗಳು ಕಾಲೇಜಿನ ಉಪಾನ್ಯಾಸಕರು ಹಾಗೂ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಒಬ್ಬ ಉತ್ತಮ ಚಿತ್ರಕಲಾವಿದರಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಕಲಾ ಶಿಕ್ಷಕ ಎಂ.ಎನ್.ಸುಬ್ರಮಣ್ಯ ಅವರು ಮಾತನಾಡಿ, ಇಲ್ಲಿ ಹಲವು ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಣಕ್ಕೆ ಪ್ರವೇಶ ಪಡೆದು ಅಷ್ಟೇ ವೇಗದಲ್ಲಿ ತರಗತಿಯಿಂದ ದೂರ ಉಳಿಯುವ ಪ್ರಸಂಗಗಳು ಹೆಚ್ಚು ನಡೆಯುತ್ತಿವೆ. ಯಾವುದೇ ಕ್ಷೇತ್ರವಾಗಿದ್ದರೂ ಆಸಕ್ತಿ ಬಹಳ ಮುಖ್ಯವಾಗಿರುತ್ತದೆ. ಎಲ್ಲಾ ಕ್ಷೇತ್ರಗಳು ತಮ್ಮದೇ ವ್ಯಾಪ್ತಿಯಲ್ಲಿ ಸಾಧನೆ ಗೈಯುತ್ತಿರುವುದನ್ನು ನೋಡುತ್ತಿದ್ದೇವೆ. ಚಿತ್ರಕಲಾ ಕ್ಷೇತ್ರವು ಇತರೆ ಕ್ಷೇತ್ರಗಳಿಗಿಂತ ತುಸು ಭಿನ್ನವಾಗಿದ್ದು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಜನಮನ್ನಣೆ ಗಳಿಸಿದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಎಲ್.ನಟರಾಜು ಮಾತನಾಡಿ, ನಾವು ಇದೇ ಕಾಲೇಜಿನಲ್ಲಿ ಕಲಿತಿದ್ದೇವೆ. ಕಾಲೇಜಿನ ಹಾಗೂ–ಹೋಗುಗಳಿಗೆ ಜೊತೆಯಾಗಿದ್ದೇವೆ. ಮುಂದೆಯೂ ನಿಮ್ಮಗಳ ಜೊತೆಯಲ್ಲಿ ಇರುತ್ತೇವೆ. ಉತ್ತಮ ಶಿಕ್ಷಣ ಕಲಿಯುವುದರತ್ತ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಖಜಾಂಚಿ ಮಹಮ್ಮದ್ ಗೌಸ್ಪೀರ್ ಮಾತನಾಡಿ, ಉತ್ತಮ ಕಲಾವಿದರಾಗಲು ಶ್ರಮ ಅತ್ಯಗತ್ಯ. ಕಾಲೇಜಿಗೆ ಸೇರುವುದು ಮುಖ್ಯವಲ್ಲ, ಸೇರಿದ ನಂತರ ತರಗತಿಗೆ ಗೈರಾಗದೆ ತಮ್ಮದೆ ಸೃಜನಶೀಲತೆಯ ಅನಾವರಣಗೊಳಿಸುವತ್ತ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಆರ್.ರಂಗಸ್ವಾಮಿ, ಸತ್ಯನಾರಾಯಣ ಟಿ.ಎಸ್, ಡಾ.ಸುರೇಂದ್ರನಾಥ್ ಡಿ.ಅರ್, ಡಾ.ಸಂತೋಷಕುಮಾರ ನಾಗರಾಳ, ಡಾ.ಶ್ವೇತ ಡಿ.ಎಸ್ ಹಾಗೂ ವಿದ್ಯಾರ್ಥಿಗಳು ಇದ್ದರು. ಸ್ವಾಗತವನ್ನು ಧನುಷ್, ಪಲ್ಲವಿ ವಂದನಾರ್ಪಣೆ ಹಾಗೂ ವಿದ್ಯಾಭಾಯಿ ಬಿ.ಎಚ್ ನಿರೂಪಣೆ ಮಾಡಿದರು. ಕುಮಾರಿ ಶ್ರೀವಿದ್ಯಾ ಟಿ.ಎಸ್. ಪ್ರಾರ್ಥನ ಗೀತೆ ಹಾಡಿದರು. ಶ್ರೀಮತಿ ವೆಂಕಟಲಕ್ಷ್ಮೀ ಹಾಜರಿದ್ದರು.