ರಾಜ್ಯದಲ್ಲಿ ಘೋಷಣೆಯಾಗಿರುವ ಹೊಸ ತಾಲ್ಲೂಕು ಕೇಂದ್ರ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ ಸಚಿವರು, ಹೊಸದಾಗಿ ಘೋಷಣೆಯಾದ ತಾಲ್ಲೂಕು ಕೇಂದ್ರಗಳ ಬಹಳಷ್ಟು ಆಸ್ಪತ್ರೆಗಳು ತಾಲ್ಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಯಾಗಿಲ್ಲ. ಇದರೊಂದಿಗೆ ರಾಜ್ಯದಲ್ಲಿ 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿವೆ ಎಂದು ತಿಳಿಸಿದರು.
ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಹಣಕಾಸಿನ ಲಭ್ಯತೆ ನೋಡಿಕೊಂಡು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.


