ನಾಪತ್ತೆಯಾಗಿದ್ದ ವೃದ್ಧೆಯ ಶವ ಮನೆಯ ಬೆಡ್ ರೂಂನಲ್ಲಿ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಹಾಸಿಗೆಯ ಕೆಳಗೆ ಪತ್ತೆಯಾಗಿದೆ. ದೆಹಲಿಯ ನಂದ್ ನಗರಿಯಿಂದ ಡಿಸೆಂಬರ್ 10 ರಂದು ನಾಪತ್ತೆಯಾಗಿದ್ದ 60 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ನೆಲ ಮಹಡಿಯ ಕೊಠಡಿಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಶಾದೇವಿ (60) ಮೃತರು. ಮಗ ಮಹಾವೀರ್ ಸಿಂಗ್ (33) 13 ರಂದು ನಂದ ನಗರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿಸೆಂಬರ್ 10 ರಿಂದ ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದ್ದಾರೆ. ಮಗನ ದೂರಿನ ಪ್ರಕಾರ, ಬಾಡಿಗೆದಾರರಿಂದ ಬಾಡಿಗೆ ವಸೂಲಿ ಮಾಡಲು ನಂದನಗರಿಗೆ ಹೋಗಿದ್ದು, ನಂತರ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ದೆಹಲಿಯ ಹರ್ಷ್ ವಿಹಾರ್ನಲ್ಲಿರುವ ಆಶಾದೇವಿ ಅವರ ಕುಟುಂಬದ ಮನೆಯ ನೆಲ ಮಹಡಿಯಿಂದ ದುರ್ವಾಸನೆ ಬರಲಾರಂಭಿಸಿತು. ನೆಲಮಹಡಿಯ ಬೆಡ್ ರೂಂ ಪರಿಶೀಲಿಸಿದಾಗ ಬೆಡ್ ಬಾಕ್ಸ್ ನೊಳಗೆ ಪ್ಲಾಸ್ಟಿಕ್ ನಲ್ಲಿ ಸುತ್ತಿ ಆಶಾದೇವಿ ಶವ ಪತ್ತೆಯಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಅಪರಾಧ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಮೃತದೇಹ ಕೊಳೆಯಲಾರಂಭಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ವಿವರವಾದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


