ದೆಹಲಿ: ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಿದ್ದು ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಸಿಎಂಗೆ ಸಚಿವ ಕೃಷ್ಣಭೈರೇಗೌಡ ಅವರು ಸಾಥ್ ನೀಡಿದ್ದಾರೆ.
ಇದರಲ್ಲಿ 4663.12 ಕೋಟಿ ರೂ. ಇನ್ಪುಟ್ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ ನೀಡುವಂತೆ ಕೋರಿದ್ದಾರೆ. 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟ ಆಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪಿಎಂ ಮೋದಿಗೆ ವಿವರಿಸಿದ್ದಾರೆ.
ಜೊತೆಗೆ ಎನ್.ಡಿ.ಆರ್.ಎಫ್. ನಿಂದ 4663.12 ಕೋಟಿ ರೂ. ಇನ್ ಪುಟ್ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದ್ದಾರೆ. ರೈತರಿಗೆ ಇನ್ ಪುಟ್ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ.
ಅಲ್ಲದೆ ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು ಪಿಎಂ-ಕಿಸಾನ್ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದು ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್.ಡಿ.ಆರ್.ಎಫ್. ಅಡಿ 17,901.73 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577.86 ಕೋಟಿ ರೂ. ಮೊತ್ತವೂ ಸೇರಿದೆ.


