ಜಮ್ಮು ಮತ್ತು ಕಾಶ್ಮೀರದ ರಾಜೌರಿ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯೋಧ ವೀರ ಮರಣವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಒಟ್ಟು ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಪತ್ತೆ ಹಚ್ಚಿದ ಸೇನೆ ನಡೆಸಿದ ಶೋಧದ ವೇಳೆ ಉಗ್ರರು ಸೇನಾ ವಾಹನದ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಇಬ್ಬರು ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರದೇಶದಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸೇನಾ ವಾಹನದ ಮೇಲೆ ದಾಳಿ ನಡೆಸಿದ ನಂತರ ಉಗ್ರರು ಅರಣ್ಯ ಪ್ರದೇಶಕ್ಕೆ ನುಗ್ಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಎನ್ ಕೌಂಟರ್ ನ ನೇತೃತ್ವ ವಹಿಸಿದೆ.
ನಿನ್ನೆ ಮಧ್ಯಾಹ್ನ 3.45ಕ್ಕೆ ರಾಜೌರಿಯ ಪೂಂಚ್ ಪ್ರದೇಶದಲ್ಲಿ ಡೇರಾ ಕಿ ಗಲಿ ಮೂಲಕ ಸಾಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚುದಾಳಿ ನಡೆಸಿದಾಗ ಎನ್ ಕೌಂಟರ್ ಪ್ರಾರಂಭವಾಯಿತು. ನಿನ್ನೆ ರಾತ್ರಿಯಿಂದ ರಾಜೌರಿ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
ಇಂದು ಪೂಂಚ್ ನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸೇನೆಯ ಮೇಲೆ ನಡೆದ ಎರಡನೇ ದೊಡ್ಡ ದಾಳಿ ಇದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಪೂಂಚ್‌ನಲ್ಲಿ ಹಲವಾರು ದಾಳಿಗಳು ವರದಿಯಾಗಿವೆ.


