ತುರುವೇಕೆರೆ: ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟಲು ಸರ್ಕಾರ ಯೋಜನೆಯನ್ನು ರೂಪಿಸಿದ್ದು, ಅದರಂತೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ ಮಾಡಿಕೊಂಡರು.
ಭಾರತ ಸರ್ಕಾರವು 03—03–24 ರಿಂದ 06—03–24 ರ ವರೆಗೆ ಹುಟ್ಟನಿಂದ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ,ಇದರ ಬಗ್ಗೆ ಆರೋಗ್ಯ ಇಲಾಖೆಯು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಅದರಂತೆ ಮಾರ್ಚ್ 3 ರ ಭಾನುವಾರದಂದು ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ತಾಲ್ಲೂಕಿಗೆ ಸಂಬಂಧಪಟ್ಟಂತೆ ಒಟ್ಟು 90 ಪೋಲಿಯೋ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಪಟ್ಟಣದಲ್ಲಿ 8 ಬೂತ್ ಗಳನ್ನು ಮಾಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ 82 ಬೂತ್ ಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಸಹ ಬೂತ್ ಸ್ಥಾಪಿಸಲಾಗಿದೆ. ಬಾಣಸಂದ್ರ ಮತ್ತು ಅಮ್ಮಸಂದ್ರ ರೈಲ್ವೆ ನಿಲ್ದಾಣಗಳಲ್ಲಿ ಪೋಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಇದರ ಮೇಲ್ವಿಚಾರಣೆಯನ್ನು 20 ಜನ ಮೇಲ್ವಿಚಾರಕರು ನಡೆಸಲಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಹುಟ್ಟಿನಿಂದ 5 ವರ್ಷದ ಒಳಗಿನ ಪೋಲಿಯೋ ಹಾಕಬೇಕಾದ ಮಕ್ಕಳ ಸಂಖ್ಯೆ 9,427 ಇದೆ ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟಲು ಸರ್ಕಾರ ಯೋಜನೆಯನ್ನು ರೂಪಿಸಿದ್ದು ಅದರಂತೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ತಾಲ್ಲೂಕಿನ ಸಮಸ್ತ ನಾಗರಿಕರು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಈ ಅಭಿಯಾನಕ್ಕೆ ಸರ್ಕಾರಿ ವಾಹನಗಳು ಹಾಗೂ ಅಗತ್ಯವಿರುವ ಕಡೆ ಖಾಸಗೀ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ಎಲ್ಲರೂ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ಮನವಿ ಮಾಡಿಕೊಂಡರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ನಮ್ಮ ಎಲ್ಲ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಮಾರ್ಚ್ 3ರಂದು ಲಸಿಕೆ ಹಾಕಿಸಿ ಕೊಳ್ಳದ ಮಕ್ಕಳನ್ನು ನಮ್ಮ ಆಶಾ ಕಾರ್ಯಕರ್ತೆಯರು ಮನೆ ಮನೆ ಗೆ ತೆರಳಿ ಅವರುಗಳನ್ನು ಗುರುತಿಸಿ ಲಸಿಕೆಯನ್ನು ಹಾಕಲಿದ್ದಾರೆ ಎಂದು ತಿಳಿಸಿದರು.
ಒಟ್ಟು 4 ದಿನ ಅಭಿಯಾನ ನಡೆಯಲಿದ್ದು, ನಾವು ಶೇಕಡಾ 100% ರಷ್ಟು ಗುರಿಯನ್ನು ತಲುಪಬೇಕಿದೆ. ಈ ದಿನಗಳಲ್ಲಿ ಯಾವುದೇ ಸಭೆ ಸಮಾರಂಭ ಗಳಿದ್ದರೂ ಕೂಡ ಅಲ್ಲಿಗೆ ತೆರಳಿ ಮಕ್ಕಳಿಗೆ ಲಸಿಕೆಯನ್ನುಹಾಕಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳಿಂದ ಸಹಕಾರವಿದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ. ಮುಂದೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದರು .
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನವೀನ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಬೋರೇಗೌಡ ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


