ಅರೆರೇ ಅಲ್ನೋಡೋ ಏಲಿಯನ್ಸು!
ಅಲ್ಲ ಕಣೋ ಅದು ರಾಕೆಟ್’ಗಳು!
ಅದು ಅಲ್ಲ ಕಣೋ ಯಾವ್ದೋ ದೇಶದವ್ರು ಇನ್ನೊಂದ್ ದೇಶದ ಮೇಲೆ ಬಾಂಬ್ ಹಾಕ್ತವ್ರೆ ಕಣೋ!
ಹಾಗಂತೆ, ಹೀಗಂತೆ ಎಂದು ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಜನತೆ ಡಿಸೆಂಬರ್ 20 ಸೋಮವಾರ ಸಂಜೆ ಈ ವಿದ್ಯಮಾನ ದ ಬಗ್ಗೆ ಏನೇನೋ ಮಾತುಕತೆಗಳು ಜನರ ಬಾಯಿಂದ ಬಾಯಿಗೆ ಹರಡಿತು.
ಅಷ್ಟಲ್ಲದೇ ವಾಟ್ಸಪ್ ಫೇಸ್ಬುಕ್’ಗಳಲೆಲ್ಲಾ ಇದರ ಬಗ್ಗೆ ಬಾರಿ ಚರ್ಚೆಗಳಾಗಿತ್ತು. ಆದರೆ ವಾಸ್ತವವಾಗಿ ಇದು ಏಲಿಯನ್ಸ್ ಅಲ್ಲಾ, ರಾಕೆಟ್’ಗಳಲ್ಲ ಮತ್ತು ಬಾಂಬ್’ಗಳಂತೂ ಅಲ್ಲವೇ ಅಲ್ಲ. ಇವೆಲ್ಲಾ ಕೃತಕ ಉಪಗ್ರಹಗಳು. ಹೌದು ನೀವು ಕೇಳುತ್ತಿರುವುದು ನಿಜ. ಇವೆಲ್ಲಾ ಮಾನವ ನಿರ್ಮಿತ ಉಪಗ್ರಹಗಳು.
ಐರನ್ ಮ್ಯಾನ್ ಎಂದೇ ಪ್ರಸಿದ್ಧಿಯಾಗಿರುವ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್’ನಿಂದ ಭೂಮಿಯ ಕೆಳ ಕಕ್ಷೆಯಲ್ಲಿ ಸುತ್ತುತ್ತಿರುವ ” ಸ್ಟಾರ್ ಲಿಂಕ್ ” ಉಪಗ್ರಹಗಳು . ಈ ಉಪಗ್ರಹಗಳಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲ್’ಗಳು ಸೂರ್ಯನ ಕಿರಣಗಳಿಗೆ ಪ್ರತಿಫಲನಗೊಂಡಾಗ ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ದೃಶ್ಯ ಗೊಚರಿಸುತ್ತದೆ. ಈ ಘಟನೆಯೇ ಮೊನ್ನೆ ಸೋಮವಾರ ಸಂಜೆ 7 ಗಂಟೆಯ ಸುಮಾರಿಗೆ ಜರುಗಿದ್ದು.
ಏನಿದು ಸ್ಟಾರ್ ಲಿಂಕ್ ?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಇಂಟರ್ನೆಟ್ ಅತ್ಯವಶ್ಯಕವಾಗಿ ಬೇಕಾಗಿದೆ. ಇದು ಇಲ್ಲಿಯವರೆಗೂ ಆಪ್ಟಿಕಲ್ ಫೈಬರ್ ಕೇಬಲ್ ( OFC ) ಸಹಾಯದಿಂದ ಟವರ್ ಮೂಲಕ ನಮ್ಮ ಮೊಬೈಲ್,ಕಂಪ್ಯೂಟರ್ ಮತ್ತು ಇನ್ನಿತರ ಸಾಧನಗಳನ್ನು ತಲುಪುತ್ತಿತ್ತು. ಆದರೆ ಕೆಲ ಗುಡ್ಡಗಾಡು,ಹಳ್ಳಿ ಇನ್ನಿತರ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯಗಳು ಸಿಗುತ್ತಿರಲಿಲ್ಲ.
ಈ ಸಮಸ್ಯೆ ಬಗೆಹರಿಸಲೆಂದೇ ಸ್ಪೇಸ್ ಎಕ್ಸ್ ಕಂಪನಿಯು ಇಂಟರ್ನೆಟ್ ಸಿಗ್ನಲ್ ಮತ್ತು ಸ್ಪೀಡ್ ಹೆಚ್ಚಿಸುವ ಸಲುವಾಗಿ ಮೊದಲ ಹಂತವಾಗಿ 12 ಸಾವಿರ ಸ್ಯಾಟಲೈಟ್ ಗಳನ್ನು ಭೂಮಿಯ ಕೆಳ ಕಕ್ಷೆಗೆ ( ಭೂಮಿ ಮೇಲ್ಮೈಯಿಂದ 160 ಕಿ.ಮೀ ಎತ್ತರ ) ಸ್ಯಾಟಲೈಟ್’ಗಳನ್ನು ಕಳಿಸುತ್ತಿದೆ.
ಡಿಸೆಂಬರ್ 18 ರಂದು ಕ್ಯಾಲಿಫೋರ್ನಿಯಾದ ಉಪಗ್ರಹ ಉಡಾವಣಾ ನಿಲ್ದಾಣದಿಂದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ್ 52 ಸ್ಯಾಟಲೈಟ್’ಗಳನ್ನು ಉಡಾವಣೆ ಮಾಡಿತ್ತು. ಇದೇ ವರ್ಷ ಮೇ 26 ರಂದು ಫಾಲ್ಕನ್ 9 ರಾಕೆಟ್ ಮೂಲಕ 60 ಸ್ಯಾಟಲೈಟ್’ಗಳನ್ನು ಕಕ್ಷೆಗೆ ಉಡಾವಣೆ ಮಾಡಿತ್ತು.
ಪ್ರತಿಸಲವೂ 50 ರಿಂದ 60 ಉಪಗ್ರಹಗಳ ಗುಂಪನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ. ಉಡಾವಣೆಯಾದ ಇಂತಹ ಯಾವುದೋ ಒಂದು ಗುಂಪು ಸೋಮವಾರ ಸಂಜೆ ನಮ್ಮ ರಾಜ್ಯದ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದೆ.
ಈವರೆಗೆ 1735 ಉಪಗ್ರಹಗಳನ್ನು ಸ್ಪೇಸ್ ಎಕ್ಸ್ ಕಂಪನಿ ಉಡಾವಣೆ ಮಾಡಿದೆ. ಸ್ಪೇಸ್ ಎಕ್ಸ್ ಕಂಪನಿಯ ಈ ಯೋಜನೆಯಿಂದ ಪ್ರಪಂಚದ ಮೂಲೆಮೂಲೆಗೂ ವೇಗದ ಇಂಟರ್ನೆಟ್ ಸಿಗಲಿದೆ. ಭಾರತ ಸರ್ಕಾರದಿಂದ ಅನುಮತಿ ಸಿಗದ ಕಾರಣ ನಾವುಗಳು ಈ ಅನುಕೂಲ ಪಡೆಯಲು ಕಾಯಬೇಕಿದೆ.
ಎಲಾನ್ ಮಸ್ಕ್ ಹೇಳುವ ಪ್ರಕಾರ 2022 ಡಿಸೆಂಬರ್ ವೇಳೆಗೆ ಸ್ಟಾರ್ ಲಿಂಕ್’ ನ ಪರವಾನಗಿ ಪಡೆದು ಭಾರತದಲ್ಲೂ ಈ ಸೌಲಭ್ಯ ದೊರಕಲಿದೆಯಂತೆ. ನೀವು ಈ ಘಟನೆಯನ್ನು ನೋಡದೇ ತಪ್ಪಿಸಿಕೊಂಡಿದ್ದರೆ ಬೇಜಾರಾಗದಿರಿ. ಕೆಳಗಿನ ವೆಬ್ಸೈಟ್ ‘ಗೆ ಭೇಟಿಕೊಟ್ಟು ಮುಂದೆ ಯಾವಾಗ ಘಟನೆಯನ್ನು ನೋಡಬಹುದು ಎಂದು ತಿಳಿದುಕೊಳ್ಳಿ. ಈ ವೆಬ್ಸೈಟ್ನಲ್ಲಿ ನಿಮ್ಮ ದೇಶ ಮತ್ತು ಸ್ಥಳ ಭರ್ತಿ ಮಾಡಿ ತಿಳಿದುಕೊಳ್ಳಿ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) , ಮಾಯಸಂದ್ರ