ದೇಶದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಲಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗುತ್ತಾರೆ. ಎಲ್ಲವನ್ನೂ ತಾಳ್ಮೆಯಿಂದ ಕಾದು ನೋಡಿ ಎಂದು ಮೈಸೂರು-ಕೊಡಗು ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೂತನ ಸಂಸದರಾದ ಬಳಿಕ ಮೊದಲ ಬಾರಿಗೆ ಯದುವಂಶದ ಗುರುಗಳಾದ ಪರಕಾಲಶ್ರೀಗಳನ್ನ ಭೇಟಿ ಮಾಡಿದರು. ಜಗನ್ಮೋಹನ ಅರಮನೆ ಸಮೀಪ ಇರುವ ಪರಕಾಲ ಮಠಕ್ಕೆ ಭೇಟಿ ನೀಡಿ, ಮೈಸೂರು ರಾಜವಂಶಸ್ಥರ ರಾಜಗುರುಗಳ ಆಶೀರ್ವಾದ ಪಡೆದರು. ಅರಮನೆಯ ಪ್ರತಿ ಕಾರ್ಯದಲ್ಲೂ ಪರಕಾಲ ಮಠದ ಉಪಸ್ಥಿತಿ ಇರುತ್ತದೆ. ಅವರ ಉಪಸ್ಥಿತಿಯಲ್ಲಿಯೇ ಅರಮನೆ ಕಾರ್ಯವೈಖರಿಗಳು ಕಾರ್ಯಾರಂಭ ಮಾಡುತ್ತವೆ.
ನಂತರ ಮಾತನಾಡಿದ ನೂತನ ಸಂಸದ ಯದುವೀರ್, ದೆಹಲಿಗೆ ಬರುವಂತೆ ಈಗಾಗಲೇ ಆಹ್ವಾನ ನೀಡಿದ್ದಾರೆ. ದೆಹಲಿಗೆ ತೆರಳಿ ಎಂಪಿ ಪ್ರಮಾಣ ವಚನ ಸ್ವೀಕರಿಸುವೆ. ಎನ್ ಡಿಎ ಹಾಗೂ ಐಎನ್ ಡಿಐಎ ಪ್ರತ್ಯೇಕ ಸಭೆಗಳ ವಿಚಾರ, ಯಾವುದೇ ಸಭೆ ನಡೆದರೂ ಅಂತಿಮವಾಗಿ ಎನ್ ಡಿಎ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಲ್ಲಿ ನನ್ನ ಗೆಲುವಿಗೆ ಜನರೇ ಕಾರಣ. ಮತದಾರರು ನನ್ನನ್ನ ಬೆಂಬಲಿಸದಿದ್ದರೆ ಕಷ್ಟವಾಗುತ್ತಿತ್ತು. ನಾನು ಇಷ್ಟೊಂದು ದೊಡ್ಡ ಪ್ರಮಾಣದ ಲೀಡ್ ಕೂಡ ಊಹಿಸಿರಲಿಲ್ಲ. ನನ್ನ ಕಾರ್ಯಕರ್ತರು, ಹಿತೈಷಿಗಳ ಜೊತೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದಗಳು ಎಂದರು.
ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಈ ಕುರಿತು ಅವಲೋಕನ, ಸಭೆಗಳು ನಡೆಯುತ್ತಿವೆ. ಎಲ್ಲಿ ಬಿಜೆಪಿ ಎಡವಿದೆ ಎಂಬುದರ ಪರಾಮರ್ಶೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಹೆಚ್ಚು ಸಂಘಟನೆ ಮಾಡಬೇಕಿದೆ. ಮೈಸೂರಿನ ಅಭಿವೃದ್ದಿಗೆ ನನ್ನದೇ ಆದಂತಹ ಕಲ್ಪನೆಗಳಿವೆ. ಮೈಸೂರಿನ ಪ್ರಗತಿಗೆ ನಾನು ಶ್ರಮಿಸುವೆ ಎಂದು ಭರವಸೆ ನೀಡಿದರು.
ಜೂನ್ 4 ನನ್ನ ಮುತ್ತಜ್ಜನ ಜನ್ಮದಿನವಾಗಿತ್ತು. ಕಾಕತಾಳೀಯ ಎಂಬಂತೆ ನಾಲ್ವಡಿ ಅವರ ಜನ್ಮದಿನದಂದೇ ನನ್ನ ಗೆಲುವಾಯಿತು. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾದಿಯಲ್ಲೇ ನಾನು ನಡೆಯುವೆ. ಅವರೇ ನನಗೆ ಆದರ್ಶ ಹಾಗೂ ಮಾರ್ಗದರ್ಶಕರು ಎಂದು ಯದುವೀರ್ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


