ಹೆಚ್.ಡಿ.ಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೆಚ್.ಡಿ.ಕೋಟೆ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಲ್ವಾನ್ ಕಾಲೋನಿಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಚಿಕ್ಕೆರೆಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮತ್ತು ತಾಲ್ಲೂಕು ಬಾಬು ಜಗನ್ ಜೀವನ ಸಮಿತಿ ಅಧ್ಯಕ್ಷರು ನಾಗರಾಜು, ತಾಲೂಕಿನ ಕೃಷಿ ಮೇಲ್ವಿಚಾರಕ ರಾಜು ಬಿ.ಜೆ. ಉದ್ಘಾಟಿಸಿದರು.

ನಂತರ ನಾಗರಾಜು ಮಾತನಾಡಿ, “ಉತ್ತಮ ಆರೋಗ್ಯ ಜೀವನ ನಡೆಸಬೇಕಾದರೆ ಆಮ್ಲಜನಕ ಪೂರೈಕೆ ಚೆನ್ನಾಗಿರಬೇಕು, ಒಂದು ಗಿಡ ನೆಟ್ಟು ಒಂದು ಮರವನ್ನು ಕಡಿಯುವಂತೆ ಕಾನೂನು ಬಂದರೆ ಮರಗಿಡಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯಿಂದ ನೀಡುವ ಗಿಡಗಳನ್ನು ಅವರವರ ಸ್ವಂತ ಜಮೀನಿನಲ್ಲಿ ನೆಡುವುದರ ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿದರು.
ನಂತರ ಮಾತನಾಡಿದ ಕೃಷಿ ಮೇಲ್ವಿಚಾರಕ ರಾಜು ಬಿ.ಜೆ. ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ತಾಲೂಕಿನ ಆದ್ಯಂತ ವಲಯ ಮೇಲ್ವಿಚಾರಕರ ಸಹಕಾರದೊಂದಿಗೆ 10 ಕಡೆ ವಿಶ್ವ ಪರಿಸರ ದಿನ ಅಂಗವಾಗಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ಕಾರಿ ಶಾಲೆಗಳಿಗೆ ಮತ್ತು ಕೆರೆ ಅಂಗಳದಲ್ಲಿ ವಿವಿಧ ಜಾತಿಯ ನೇರಳೆ, ಸೀಬೆ, ಸಿಲ್ವರ್, ಮಹಾಗನಿ, ತೇಗ, ಬೇವು, ಹಲಸು, ನಿಂಬೆ, ದಾಳಿಂಬೆ ಹೀಗೆ ವಿವಿಧ ಗಿಡಗಳನ್ನು ನೀಡುವುದರ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಯೋಜನೆಯು ಕಿರು ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕ ಮತ್ತು ಸಮುದಾಯಾಭಿವೃದ್ಧಿ ಕಾರ್ಯಗಳು, ಜಾಗೃತಿ ಕಾರ್ಯಕ್ರಮಗಳು, ವಿಮಾ ಕಾರ್ಯಕ್ರಮಗಳು, ಜ್ಞಾನವಿಕಾಸ ಕಾರ್ಯಕ್ರಮಗಳು, ಹೀಗೆ ಹತ್ತು ಹಲವಾರು ಬಗೆಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ಶಾಲೆಗೆ ಸಂಸ್ಥೆಯಿಂದ ನೀಡುವ ಪ್ರತಿಯೊಂದು ಗಿಡಗಳ ಬಗ್ಗೆ ಮಕ್ಕಳು ಮತ್ತು ಶಿಕ್ಷಕರಿಗೆ ರಕ್ಷಣೆ, ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ವಹಿಸಿದರು. ಮಕ್ಕಳು ತಮ್ಮ ತಮ್ಮ ಹುಟ್ಟುಹಬ್ಬದ ಶುಭದಿನ ದುಂದುವೆಚ್ಚ ಮಾಡುವ ಬದಲು ಗಿಡಗಳನ್ನು ನೆಡುವ ಅಭ್ಯಾಸ ಈಗಿನಿಂದಲೇ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕೆರೆಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಕೃಷಿ ಮೇಲ್ವಿಚಾರಕ ರಾಜು ಬಿಜೆ, ಗ್ರಾಮ ಪಂಚಾಯತಿ ಸದಸ್ಯ ರಮೇಶ್, ಮಹೇಶ್, ಶಾಲೆಯ ಮುಖ್ಯ ಶಿಕ್ಷಕ ಸಣ್ಣಯ್ಯ, ವಲಯ ಮೇಲ್ವಿಚಾರಕಿ ಶ್ರೀಮತಿ ವರ್ಷ, ತಾಲೂಕಿನ ಜಗಜೀವನ್ ಸಮಿತಿ ಅಧ್ಯಕ್ಷ ನಾಗರಾಜು, ಅಂಗನವಾಡಿ ಶಿಕ್ಷಕಿ ರೇಖಾ, ಸೇವಾಪ್ರತಿನಿಧಿ ಮಹೇಶ್, ಊರಿನ ಮುಖಂಡರಾದ ಶ್ರೀನಿವಾಸ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


