ಸರಗೂರು: “ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ದಲಿತ ಚಳುವಳಿ ಸಂಸ್ಥಾಪಕ ಹಾಗೂ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ, 88 ವರ್ಷದ ಜನ್ಮದಿನಾಚರಣೆ ಜೂ. 9 ಭಾನುವಾರ ದಂದು ಬೆಂಗಳೂರು ಪುರಭವನದಲ್ಲಿ ನಡೆಯಲಿದೆ” ಎಂದು ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ತಿಳಿಸಿದರು.
ತಾಲ್ಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ದಂದು ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸ್ವಾತಂತ್ರೋತ್ತರ ಕಾಲಮಾನದಲ್ಲಿ ಘಟಿಸಿದ ದಲಿತ ಚಳುವಳಿ ಮತ್ತು ಕರ್ನಾಟಕದ ನೆಲದಲ್ಲಿ ಅದು ಹುಟ್ಟು ಹಾಕಿದ್ದ ಸ್ಥಿತ್ಯಂತರಗಳನ್ನು ದಾಖಲಿಸದಿರಲು ಸಾಧ್ಯವಿಲ್ಲ. ಎಪ್ಪತ್ತರ ದಶಕದ ಹೊತ್ತಿಗೆ ವಿದ್ಯಾವಂತ, ಮೊದಲು ದಲಿತ ತಲೆಮಾರು ಕರ್ನಾಟಕದಲ್ಲಿ ಹುಟ್ಟಿ ದಲಿತ ಸಮುದಾಯಗಳ ಮೇಲೆ ಜಾತಿಯ ಕಾರಣಕ್ಕೆ ಆಗುತ್ತಿದ್ದ ಶೋಷಣೆ, ಹಿಂಸೆ, ದೌರ್ಜನ್ಯಗಳ ವಿರುದ್ಧ ಮಾತನಾಡಿದರು ಎಂದು ತಿಳಿಸಿದರು.
ಬಿ. ಕೃಷ್ಣಪ್ಪ ನವರು ದಲಿತ ಹೋರಾಟಗಾರರಾಗಿ ಅಷ್ಟೇ ಅಲ್ಲದೆ ಪತ್ರಕರ್ತರಾಗಿ ಲೇಖಕರಾಗಿ ಮತ್ತು ಅಂಬೇಡ್ಕರ್ ವಾದದ ಕಣ್ಣನೋಟದಿಂದ ಸಾಹಿತ್ಯ, ಸಮಾಜ, ರಾಜಕಾರಣವನ್ನು ಗ್ರಹಿಸಲು ಪ್ರಯತ್ನಿಸಿದ ಅಪೂರ್ವ ಚಿಂತಕರೂ ಆಗಿದ್ದರು. ದಲಿತ ಚಳುವಳಿಯನ್ನು ಲೋಹಿಯಾ ಸಮಾಜವಾದ ಮಾರ್ಕ್ಸ್ ವಾದ. ಮಾವೋವಾದಿ ಸಿದ್ಧಾಂತಗಳಿಂದ ಬಿಡಿಸಿ ಅಂಬೇಡ್ಕರ್ ವಾದ ಮತ್ತು ನವಯಾನ ಬುದ್ದಿಸಂನ ತಿಳುವಳಿಕೆಯಿಂದ ಕಟ್ಟಲು ಪ್ರಯತ್ನಿಸಿದ ಅಂಬೇಡ್ಕರ್ ವಾದಿ ಪ್ರೋ ಬಿ. ಕೃಷ್ಣಪ್ಪ ನವರು ಎಂದರು.
ಅಸಮಾನ ಸಮಾಜದಲ್ಲಿ ಬದಲಾವಣೆ ತರುವುದಕ್ಕಾಗಿ, ಸಮಾನತೆಯ ಸಮಾಜವನ್ನು ನಿರ್ಮಿಸುವುದಕ್ಕಾಗಿ ತಮ್ಮ ಇಡೀ ಬದುಕು -ಬರಹವನ್ನು ಸವೆಸಿದ ಇಂತಹ ಪ್ರೋ ಬಿ. ಕೃಷ್ಣಪ್ಪ ಅವರಂತಹ ಅಪ್ರತಿಮ ನಾಯಕ, ಚಿಂತಕ, ಹೋರಾಟಗಾರನ ಜನ್ಮ ದಿನವನ್ನು “ಸಂಘರ್ಷ ದಿನ”ವನ್ನಾಗಿ ಅಚರಿಸುವ ಮೂಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಿ. ಕೃಷ್ಣಪ್ಪ ನವರ ಸಮಸಮಾಜದ ಕನಸನ್ನು ನನಸಾಗಿಸಲು ಬದ್ಧವಾಗಿ ದುಡಿಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ತಾಲ್ಲೂಕು ಸಂಘಟನೆ ಸಂಚಾಲಕರು ಚಂದ್ರ, ಕಂದೇಗಾಲ ಅಯಣ್ಣಸ್ವಾಮಿ, ದೊಡ್ಡಯ್ಯ, ಗ್ರಾಪಂ ಉಪಾಧ್ಯಕ್ಷ ಇಟ್ನ ಚಿಕ್ಕಣ್ಣ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


