ತುರುವೇಕೆರೆ: “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುರುವೇಕೆರೆ ತಾಲೂಕಿನ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರುಗಳು ಹೋರಾಟ ಮಾಡಿ, 45,000 ಮತಗಳ ಅಂತರದಿಂದ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ವಿ. ಸೋಮಣ್ಣರನ್ನು ಗೆಲ್ಲಿಸಿದ್ದಾರೆ. ಎರಡು ಪಕ್ಷಗಳ ಮುಖಂಡರುಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದರು.
ತುರುವೇಕೆರೆ ತಾಲೂಕಿನ ಚಿಕ್ಕೋನಹಳ್ಳಿಯ ಗೇಟ್ ಬಳಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ದಿನ ಬಹಳ ಖುಷಿಯಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಮುಖಂಡರುಗಳು ನಾಯಕರುಗಳು ಒಗ್ಗಟ್ಟಿನ ಮಂತ್ರದಿಂದ ವಿ. ಸೋಮಣ್ಣನವರ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ನಮ್ಮ ಅಭ್ಯರ್ಥಿಯು ಬಹಳ ಸಜ್ಜನಿಕೆಯ ರಾಜಕಾರಣಿ, ಎರಡು ಬಾರಿ ಪರಾಜಿತರಾಗಿದ್ದರು. ಅವರಿಗೆ ತುಮಕೂರು ಜಿಲ್ಲೆ ಮತ್ತು ತುರುವೇಕೆರೆ ಕ್ಷೇತ್ರ ರಾಜಕೀಯವಾಗಿ ಮರುಜನ್ಮ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು ಹಾಗೂ ಸೋಮಣ್ಣನವರು ಕೇಂದ್ರ ಸರ್ಕಾರದ ಸಚಿವರಾಗುವ ಸಂಭವ ಹೆಚ್ಚಾಗಿದೆ. ಅವರು ಸಚಿವರಾದರೆ ಈ ತಾಲೂಕನ್ನು ಅಭಿವೃದ್ಧಿ ಮಾಡಬೇಕು. ಹೇಮಾವತಿ ನೀರಿನ ಹೋರಾಟಕ್ಕೆ ಭದ್ರವಾಗಿ ನಿಂತು ಹೋರಾಟ ಮಾಡಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ಅನೇಕ ಅಭಿವೃದ್ಧಿ ಯೋಜನೆಗಳನ್ನು ತಾಲೂಕಿಗೆ ತಂದು ಅಭಿವೃದ್ಧಿ ಎಂದು ನಾನು ಅವರನ್ನ ಒತ್ತಾಯಿಸುತ್ತೇನೆ. ತಮಗೆಲ್ಲರಿಗೂ ಗೊತ್ತಿದ್ದ ಹಾಗೆ ಅವರು ಸುಖ–ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ, ತಾವುಗಳೆಲ್ಲ ನೋಡಿರಬಹುದು ವಿಜಯನಗರದಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು. ಅದೇ ರೀತಿಯಲ್ಲಿಯೇ ನಮ್ಮ ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಬೇಕು. ಅಭಿವೃದ್ಧಿ ಮಾಡುತ್ತಾರೆಂಬ ಆಶಾಭಾವನೆ ನಮ್ಮಲ್ಲಿ ಇದೆ. ನಾವು ಕೂಡ ಅವರ ಜೊತೆ ಕೈ ಜೋಡಿಸುತ್ತೇವೆ. ನೀರಾವರಿ, ರಸ್ತೆ,ಕೈಗಾರಿಕೆ, ಉದ್ಯೋಗ ಮತ್ತು ಬೇರೆ ಬೇರೆ ಸಮುದಾಯಗಳ ಅಭಿವೃದ್ಧಿ ಕೆಲಸ ಮಾಡಬೇಕು, ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಮತ್ತೊಮ್ಮೆ ಕ್ಷೇತ್ರದ ಮತದಾರರಿಗೆ ನಾಗರಿಕರಿಗೆ ಕಾರ್ಯಕರ್ತರಿಗೆ ಮಹಿಳೆಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲಿ ಮಹಿಳೆಯರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಗ್ಯಾರಂಟಿಗಳಿಗೆ ಒಳಗಾಗದೆ ಪುರುಷರಷ್ಟೇ ಸಮಾನವಾಗಿ ಮತ ನೀಡಿದ್ದಾರೆ ಎಂದರು.
ಕ್ಷೇತ್ರದ 200 ಮತಗಟ್ಟೆಗಳಲ್ಲಿ ಬಿಜೆಪಿ ಲೀಡಾಗಿದೆ. ಅಂಚೆ ಮತ ಸೇರಿ 45,000 ಮತಗಳ ಅಂತರ ನೀಡಿದ್ದಾರೆ. ಸೋಮಣ್ಣನವರಿಗೆ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ ಎಂಬ ಮಾತನ್ನು ಕೊಟ್ಟಿದ್ದೆವು. ಅದರಂತೆ ಮೈತ್ರಿ ಧರ್ಮ ಪಾಲನೆ ಮಾಡಿ ನಾವು ಅಧಿಕ ಅಂತರದಿಂದ ಗೆಲ್ಲಿಸಿಕೊಂಡಿದ್ದೇವೆ. ಜಿಲ್ಲೆಗೆ ಹೊಸ, ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಹೆಚ್ಚು ಒತ್ತು ಕೊಡಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿ.ಬಿ. ಸುರೇಶ್, ಗುತ್ತಿಗೆದಾರ ಸಿದ್ದಲಿಂಗಯ್ಯ, ಪಟ್ಟಣ ಪಂಚಾಯಿತಿ ಮಾಜಿ ಮತ್ತು ಹಾಲಿ ಸದಸ್ಯ ಟಿ ಕೆ ಚಿದಾನಂದ್, ಗುತ್ತಿಗೆದಾರ ಕಾಳಂಜಿಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


