ಸರಗೂರು: ಆಲನಹಳ್ಳಿ ಹಾಡಿಯ ಕುರುಬ ಜನಾಂಗದವರಿಗೆ ಸರಿಯಾದ ಮಸಣ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೂ ಪರದಾಡಿದ ಘಟನೆಗೆ ಸಂಬಂಧಿಸಿದಂತೆ ‘ನಮ್ಮತುಮಕೂರು.ಕಾಂ ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
“ಮಸಣಕ್ಕೂ ಜಾಗ ಇಲ್ಲ: ಆಲನಹಳ್ಳಿ ಹಾಡಿಯ ಜನರ ಕಷ್ಟ ಕೇಳುವವರು ಯಾರು?” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಸುದ್ದಿಯ ಬೆನ್ನಲ್ಲೇ ತಾಲ್ಲೂಕಿನ ತಹಶೀಲ್ದಾರ್ ಚಲುವರಾಜು ಮತ್ತು ಸಿಬ್ಬಂದಿ ಹಾಡಿಗೆ ಭೇಟಿ ನೀಡಿ ಕುರುಬ ಜನಾಂಗದ ಸಮಸ್ಯೆಯನ್ನು ಆಲಿಸಿದ್ದಾರೆ.
ಹಾಡಿಗೆ ಆಗಮಿಸಿದ ತಹಶೀಲ್ದಾರ್ ಅವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಇವರು ಕಾಡು ಕುರುಬರು, ಕಾಡಿನಿಂದ ನಾಡಿಗೆ ಬಂದು ಜೀವನವನ್ನು ಸಾಗಿಸುತ್ತಿದ್ದಾರೆ. ಇವರಿಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿಲ್ಲ. ಇವರು ಜೀವನ ಮಾಡಬೇಕಾದರೆ ಕಾಡಿನಿಂದ ಸೌಧೆ ಇತರ ಪದಾರ್ಥಗಳನ್ನು ತೆಗೆದುಕೊಂಡು ಬರುವುದು ಅನಿವಾರ್ಯವಾಗಿದೆ ಎಂದರು.
ಹಾಡಿ ಮಹಿಳೆಯೊಬ್ಬರು ಮಾತನಾಡಿ, “ನಮಗೆ ಬಾಳ ತೊಂದ್ರಿ ಕೊಡ್ತಾರ. ಈ ಸೋಲರ್ ತಂತಿ ಇರಕೂಡದು ಇಲ್ಲಿ. ನಾವು ಹಿಂಗೆ ಮೃತದೇಹ ತಂದು ಮಡಿಕಂಡು, ಅವರು ತಗೀಗಂಟ ಹಿಂಗೆ ಕಾಯ್ಕೊಂಡು ನಿಂತಿರ್ ಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಹಾಡಿಯ ಪುರುಷರೊಬ್ಬರು ಮಾತನಾಡಿ, “ಹಿರಿಯರ ಕಾಲದಲ್ಲಿ ನಡೆದಂತೆಯೇ ಈಗಲೂ ನಡೆಯಬೇಕು. ಬರೋಕೆ ನಮಗೆ ಜಾಗ ಇಲ್ಲ. ಸರ್ಕಾರ ನಮಗೆ ಏನು ಮಾಡಿಕೊಟ್ಟಿದೆ?” ಎಂದು ಪ್ರಶ್ನಿಸಿದರು.
‘ನಮ್ಮ ತುಮಕೂರು ಮಾಧ್ಯಮ ಪ್ರತಿನಿಧಿ ಜೊತೆಗೆ ಮಾತನಾಡಿದ ತಹಶೀಲ್ದಾರ್, ಆಲನಹಳ್ಳಿ ಹಾಡಿಗೆ ಇಂದು ಭೇಟಿ ನೀಡಿದ್ದೇನೆ.ಇಲ್ಲಿ ಸ್ಮಶಾನಕ್ಕಾಗಿ ಜಾಗವನ್ನು ಗುರುತು ಮಾಡಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಸರ್ಕಾರ ಮಂಜೂರು ಮಾಡಿ ಕಳುಹಿಸಲಿದೆ ಎಂದು ತಿಳಿಸಿದರು.
ಸರಗೂರು ತಾಲ್ಲೂಕಿನ ಉಳಿದ ಹಾಡಿಗಳಲ್ಲೂ ಇದೇ ಸಮಸ್ಯೆ ಇದೆ ಎಂಬ ಬಗ್ಗೆ ಪ್ರಶ್ನಿಸಿದಾಗ, “ಸರ್ಕಾರಿ ಜಮೀನು ಎಲ್ಲಿದೆಯೋ ಅಲ್ಲಿ ಗುರುತು ಮಾಡಿ ಸಾರ್ವಜನಿಕ ಸ್ಮಶಾನಗಳನ್ನು ಮಾಡುತ್ತೇವೆ. ಹಾಡಿ ಜನರು ಅಲ್ಲಿಯೇ ಶವಸಂಸ್ಕಾರ ಮಾಡಬೇಕಾಗುತ್ತದೆ. ಸ್ಮಶಾನದ ಸಮಸ್ಯೆ ತಲೆದೋರದಂತೆ ಕ್ರಮವಹಿಸಲಾಗುತ್ತಿದೆ” ಸ್ಪಷ್ಟಪಡಿಸಿದರು.
ವರದಿ: ಚಂದ್ರಹಾದನೂರು