ಹೆಣ್ಣು ಎಂದರೆ ತಾಯಿ. ಹೆಣ್ಣು ಎಂದರೆ ಸಹೋದರಿ. ಹೆಣ್ಣು ಎಂದರೆ ಗೆಳತಿ. ಹೆಣ್ಣು ಎಂದರೆ ಪತ್ನಿ. ಹೆಣ್ಣು ಎಂದರೆ ಮಗಳು. ಹೀಗೆ ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.
ಭಾರತದಲ್ಲಿ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳ ದಿನದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕಳೆದ 2008ರಲ್ಲಿ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯವು ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಲಾಗಿದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣುಮಕ್ಕಳಿಗೆ ಅವರ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ದಿನದ ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಮುಂದೆ ಓದಿ.
ಕಳೆದ 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರಾರಂಭಿಸಿತು. ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಇದರ ಮಧ್ಯೆ ಹೆಣ್ಣು ಮಕ್ಕಳ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ಬೇಟಿ ಬಚಾವೋ ಬೇಟಿ ಪಢಾವೋ, ಹೆಣ್ಣು ಮಕ್ಕಳಿಗೆ ಉಚಿತ ಅಥವಾ ಅನುದಾನಿತ ಶಿಕ್ಷಣ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶೇಷ ಮೀಸಲಾತಿ ನೀಡುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2022ರ ಗುರಿ:
2022ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಗುರಿ ಇನ್ನೂ ಘೋಷಣೆಯಾಗಿಲ್ಲ. ಹಾಗಿದ್ದರೂ 2021ರ ಹೆಣ್ಣು ಮಕ್ಕಳ ದಿನಾಚರಣೆಯ ಉದ್ದೇಶವಾಗಿರುವ ‘ಡಿಜಿಟಲ್ ಪೀಳಿಗೆಯೇ, ನಮ್ಮ ಪೀಳಿಗೆ ಆಗಿತ್ತು. ಅದೇ ರೀತಿ 2020ರಲ್ಲಿ ಹೆಣ್ಣು ಮಕ್ಕಳ ದಿನದ ಘೋಷವಾಕ್ಯ ‘ನನ್ನ ಧ್ವನಿಯೇ ನಮ್ಮ ಸಾಮಾನ್ಯ ಭವಿಷ್ಯ ಎಂಬುದಾಗಿತ್ತು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿರ್ದೇಶನಗಳು:
– ಹೆಣ್ಣು ಮಕ್ಕಳ ಜನ್ಮ ದಿನಾಚರಣೆಯನ್ನು ಕುಟುಂಬ ಮತ್ತು ಸಮುದಾಯದಲ್ಲಿ ಆಚರಿಸುವುದು
– ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವವಿರಲಿ
– ಹುಡುಗರು ಮತ್ತು ಹುಡುಗಿಯರ ನಡುವೆ ಸಮಾನತೆ ಉತ್ತೇಜಿಸುವ ಮಾರ್ಗಗಳನ್ನು ಕಂಡುಕೊಳ್ಳಿ
– ಶಾಲೆಗಳಲ್ಲಿ ಹೆಣ್ಣು ಮಗುವಿಗೆ ಸುರಕ್ಷಿತ ಪ್ರವೇಶ ನೀಡುವುದು
– ಸಮಾಜದ ಸಮಾನ ಸದಸ್ಯರಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸಲು ಗಂಡು ಮಕ್ಕಳಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಿ
– ಲಿಂಗ ಪತ್ತೆ ಪರೀಕ್ಷೆಯ ಯಾವುದೇ ಘಟನೆಗಳು ಕಂಡು ಬಂದರೆ ತಿಳಿಸಿರಿ
– ನೆರೆಹೊರೆಯ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷಿತ ಮತ್ತು ಹಿಂಸೆ-ಮುಕ್ತಗೊಳಿಸಲು ಶ್ರಮಿಸಿ
– ಕುಟುಂಬ ಮತ್ತು ಸಮುದಾಯದಲ್ಲಿ ವರದಕ್ಷಿಣೆ ಮತ್ತು ಬಾಲ್ಯ ವಿವಾಹವನ್ನು ವಿರೋಧಿಸಿ
– ಸರಳ ವಿವಾಹಗಳನ್ನು ಪ್ರತಿಪಾದಿಸಿ
– ಪಿತ್ರಾರ್ಜಿತವಾಗಿ ಆಸ್ತಿಯನ್ನು ಹೊಂದು ಮಹಿಳೆಯರ ಹಕ್ಕನ್ನು ಬೆಂಬಲಿಸಿ
– ಮಹಿಳೆಯರ ಉನ್ನತ ವ್ಯಾಸಂಗ, ಉದ್ಯೋಗ, ವ್ಯಾಪಾರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಸಂಚರಿಸಲು ಪ್ರೋತ್ಸಾಹಿಸಿ.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy