ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಸಾಮೂಹಿಕ ಶ್ರೀ ಶನಿಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಅದ್ದೂರಿಯಿಂದ ನೆರವೇರಿತು.
ಕಾರ್ಯಕ್ರಮದ ಮೊದಲಿಗೆ ಸ್ವಾಮಿಯ ಅರ್ಚಕರಾದ ಶ್ರೀ ಅಡವೀಶಪ್ಪನವರ ನೇತೃತ್ವದಲ್ಲಿ ಹೊನ್ನವಳ್ಳಿಯ ನೂರೈವತ್ತೊಂದು ದಂಪತಿಗಳ ಸಮಕ್ಷಮದಲ್ಲಿ ಶ್ರೀ ಸ್ವಾಮಿ ಶನಿದೇವರ ಪೂಜೆ, ನವಗ್ರಹಗಳ ಪೂಜೆ ನೆರವೇರಿತು.
ಬಳಿಕ ಕೀರ್ತನಕಾರರಾದ ಡಾ.ಅಶೋಕ್ ಕೆ.ಪಿ.ರವರು ಶನಿದೇವರ ಹುಟ್ಟು, ದೇವರು ಹಾಗೂ ಮಾನವನ ಜೀವನದಲ್ಲಿ ಶನಿಮಹಾತ್ಮರ ಪಾತ್ರದ ಬಗ್ಗೆ ಸವಿಸ್ತಾರವಾಗಿ ಕಥಾ ಪರಾಯಣವು ನಡೆಸಿಕೊಟ್ಟರು.
ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ತಿಪಟೂರು ಶಾಸಕರಾದ ಷಡಕ್ಷರಿಯವರು ಉದ್ಘಾಟಿಸಿ ಮಾತನಾಡಿ, ರಾಜ್ಯದ ಜನತೆಗೆ ಸರ್ಕಾರದ ಒಟ್ಟೊಟ್ಟಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜನ ಸಂಘಟನೆಯ ಮುಖೇನ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಮನ್ನಣೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
13 ವರ್ಷದ ಹಿಂದೆ ತಾಲ್ಲೂಕಿಗೆ ಯೋಜನೆಯು ಕಾಲಿಟ್ಟಾಗ ತಿಪಟೂರಿನ ವ್ಯಾಪ್ತಿಯಲ್ಲಿ ಮಾತ್ರ ಇದ್ದು, ಪ್ರಸ್ತುತ ಶ್ರೀ ಕೆಂಪಮ್ಮ ದೇವಿಯ ಕೃಪೆಯೊಂದಿಗೆ ಯೋಜನೆ ತಾಲ್ಲೂಕಿನ ಪ್ರತಿ ಮೂಲೆ ಮೂಲೆಗೂ ತಲುಪಿ ಬಡ ಜನತೆಗೆ ಆರ್ಥಿಕ ಶಿಸ್ತನ್ನು ಕಲಿಸಿಕೊಡುವುದರೊಂದಿಗೆ ತಾಲ್ಲೂಕಿನ ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನೆರೆದ ಎಲ್ಲಾ ಜನತೆಗೆ ಭಗವಾನ್ ಶ್ರೀ ಶನಿದೇವರು ಹಾಗೂ ಮಂಜುನಾಥಸ್ವಾಮಿಯು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು–1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡುತ್ತಿಲ್ಲ, ಬದಲಾಗಿ ರಾಜ್ಯದಲ್ಲಿ ಸರಿಸುಮಾರು 6ಲಕ್ಷ ಸಂಘಗಳನ್ನು ಮಾಡಿ ಬಡವರ್ಗದ ಜನತೆಯ ಏಳಿಗೆಗಾಗಿ ಕೃಷಿ ಕಾರ್ಯಕ್ರಮಗಳು, ಜ್ಞಾನವಿಕಾಸ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡುವುದರೊಟ್ಟಿಗೆ ಸಂಘದ 60 ಲಕ್ಷ ಕುಟುಂಬಗಳಿಗೆ ದೇಶದ ಪ್ರತಿಷ್ಟಿತ ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ನೇರ ಸಾಲ ಸೌಲಭ್ಯವನ್ನು ಒದಗಿಸಿಕೊಟ್ಟು, ರಾಜ್ಯದ 3 ಕೋಟಿ ಜನತೆಯ ಮನೆಮನಗಳನ್ನು ಮುಟ್ಟಿದೆ ಎಂದು ತಿಳಿಸಿದರು.
ಹೊನ್ನವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೊಡ್ಡಯ್ಯನವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಹೋಬಳಿಯ ಸಬ್ ಇನ್ಸ್ಪೆಕ್ಟರ್ ಚಂದ್ರಕಾಂತ್, ಮತ್ತಿಹಳ್ಳಿ ಗ್ರಾಮ ಪಂ.ಸದಸ್ಯರಾದ ಹರೀಶ್ ಗೌಡ, ಹೊನ್ನವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಶ್ರೀಕಂಠಮೂರ್ತಿ, ಪ್ರಸಾದ್, ರೈತ ಹೋರಾಟಗಾರರಾದ ಮುಪ್ನೇಗೌಡ, ಸಾಮೂಹಿಕ ಶ್ರೀ ಶನಿಪೂಜಾ ಸಮಿತಿ ಅದ್ಯಕ್ಷರಾದ ಜಗದೀಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಿಪಟೂರು ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ., ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಹಾಗೂ ಹೊನ್ಮವಳ್ಳಿ ಹೋಬಳಿಯ ಸುತ್ತಮುತ್ತಲ ಸಾವಿರಕ್ಕೂ ಅಧಿಕ ಮಂದಿಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4