ಗುವಾಹಟಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಗುರುವಾರ ಮುಂಜಾನೆ ಸಂಭವಿಸಿದ್ದು, ಭೂಕಂಪನಕ್ಕೆ ಇಲ್ಲಿನ ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಅಸ್ಸಾಂನ ಕೇಂದ್ರ ಭಾಗ ಹಾಗೂ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಭೂಕಂಪನಗಳು ಸಂಭವಿಸಿವೆ. ಭೂಕಂಪದಿಂದ ಯಾರಿಗೂ ಯಾವುದೇ ಗಾಯ ಅಥವಾ ಯಾವುದೇ ಆಸ್ತಿಗಳಿಗೆ ಹಾನಿಯಾದ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಭೂಕಂಪವು ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಗುವಾಹಟಿಯಿಂದ ಪೂರ್ವಕ್ಕೆ 52 ಕಿ.ಮೀ ದೂರದಲ್ಲಿ ದಾಖಲಾಗಿದೆ. ನೆರೆಯ ಕಾಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕರ್ಬಿ ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ-ಮಂಕಚಾರ್ ಮತ್ತು ಗೋಲ್ಪಾರಾ ಜಿಲ್ಲೆಗಳ ಜನರಿಗೂ ಕಂಪನದ ಅನುಭವವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4