ಬೆಂಗಳೂರು: ಕಟ್ಟಡದ ಸ್ವಾಧೀನ ಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶವಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಡಿದ ಆಕ್ಷೇಪಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವರು, ಸ್ವಾಧೀನಪತ್ರವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಅಲ್ಲದೆ ಕಳೆದ ಮಾ.13 ರಂದು ಈ ಸಂಬಂಧ ಕೆಇಆರ್ ಸಿ ಆದೇಶವಿದೆ. ಕಾಯ್ದೆಗೆ ತಿದ್ದುಪಡಿಯಾಗದ ಹೊರತು ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿದ್ಯುತ್ ಸಂಪರ್ಕಕ್ಕಾಗಿ 4 ಲಕ್ಷ ಕಟ್ಟಡ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸ್ವಾಧೀನಪತ್ರ ಹಾಗೂ ಕಟ್ಟಡ ಮುಕ್ತಾಯದ ಪ್ರಮಾಣ ಪತ್ರವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದೆಂಬ ಸುಪ್ರೀಂಕೋರ್ಟ್‌ನ ಆದೇಶವಿದ್ದರೆ ನೀಡಲಿ. ಇಂದೇ ಸರ್ಕಾರ ಆದೇಶ ಹೊರಡಿಸಿ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಈ ಸಂಬಂಧ ವಿಸ್ತೃತವಾಗಿ ಮಾಹಿತಿ ನೀಡುವ ಭರವಸೆ ನೀಡಿದ ಅವರು, 4 ಲಕ್ಷ ಅರ್ಜಿದಾರರಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ ಹಣ ಪಾವತಿಸಿದವರು ಇದ್ದಾರೆ. ಗಮನ ಸೆಳೆಯುವ ಸೂಚನೆ ವಿಚಾರದಲ್ಲಿ ಈ ಬಗ್ಗೆ ಸಮಗ್ರ ಉತ್ತರ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಅಶ್ವತ್ಥನಾರಾಯಣ, ಕೆಇಆರ್‌ಸಿ ಆದೇಶವಿಲ್ಲದಿದ್ದರೂ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಅಕ್ರಮ-ಸಕ್ರಮ ನಿಯಮಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್‌ನ ಮಧ್ಯಂತರ ಆದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬಹುದು ಎಂದು ಹೇಳಿದೆ. ಶೇ.15 ರಷ್ಟು ವಿನಾಯಿತಿ ಕೊಟ್ಟರೆ ಉಪಯೋಗವಿಲ್ಲ. ಕೊಡುವುದಾದರೆ ಕೆಲವರಿಗೆ ಮಾತ್ರ ಏಕೆ ಕೊಡಬೇಕು. ಎಲ್ಲರಿಗೂ ವಿನಾಯಿತಿ ಕೊಡಿ. ದಂಡವಿಲ್ಲದೆ ವಿನಾಯಿತಿ ನೀಡಿ. 1 ಲಕ್ಷ ರೂ. ಕೋಟಿ ಸಂಗ್ರಹಿಸುವ ಉದ್ದೇಶವಿದೆ ಎಂದು ಆರೋಪಿಸಿದರು.
ಬಿಜೆಪಿಯ ಹಲವು ಶಾಸಕರು ಮಾತನಾಡಿ, ಸಾಲಸೋಲ ಮಾಡಿ ಮನೆ ಕಟ್ಟಿ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಅವರಿಗೊಂದು ಪರಿಹಾರ ಒದಗಿಸಿ ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಬಿಜೆಪಿ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ವಾಗ್ವಾದ ನಡೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC