ತಿಪಟೂರು: ನಗರದ ತಾಲ್ಲೂಕು ಆಸ್ಪತ್ರೆ ಹಾಗೂ ನೊಣವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಅಂಬುಲೆನ್ಸ್ ಸೇವೆ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ.
ತಾಲ್ಲೂಕಿನಲ್ಲಿದ್ದ ಎರಡು 108 ಅಂಬುಲೆನ್ಸ್ ಗಳನ್ನು ದುರಸ್ತಿ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಆಸ್ಪತ್ರೆ ಹಿಂಬಾಗದಲ್ಲಿ ನಿಲ್ಲಿಸಲಾಗಿದೆ. ಕಳೆದ ವಾರ ತಾಲ್ಲೂಕಿನಲ್ಲಿ ಅಂಬುಲೆನ್ಸ್ ಸೇವೆ ಹಾಗೂ ತುರ್ತು ಚಿಕಿತ್ಸೆ ಸಿಗದೆ ಕರೀಕೆರೆ ಗ್ರಾಮದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಸಾರ್ವಜನಿಕರು ತುರ್ತು ಸೇವೆಗಾಗಿ ಖಾಸಗಿ ಅಂಬುಲೆನ್ಸ್ ಮತ್ತು ವಾಹನಗಳ ಮೊರೆ ಹೋಗುವ ಅನಿವಾರ್ಯ ಎದುರಾಗಿದೆ.
ತಿಪಟೂರು ತಾಲ್ಲೂಕು ಆಸ್ಪತ್ರೆಗೆ ಸುತ್ತಲಿನ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಅರಸೀಕೆರೆ, ಹುಳಿಯಾರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿ, ಬಾಣಂತಿಯರ ಬರುತ್ತಿದ್ದಾರೆ. ಹೆರಿಗೆ ಸಮಯದಲ್ಲಿ 108′ ಸೇವೆಯಿಲ್ಲದೆ ತಾಯಿ ಹಾಗೂ ಶಿಶುವಿನ ಜೀವಕ್ಕೆ ಅಪಾಯವಾದ ನಿದರ್ಶನಗಳಿವೆ.
ನಗರವಷ್ಟೇ ಅಲ್ಲದೆ ಸುತ್ತಲಿನ ಗ್ರಾಮಗಳ ಜನರು 108 ಸೇವೆಯಿಲ್ಲದೆ ಸಮಸ್ಯೆಯಿಂದ ನರಳುತ್ತಿದ್ದಾರೆ. ದೂರದ ಗ್ರಾಮಗಳಿಂದ ಆಸ್ಪತ್ರೆಗೆ ಬರಲು ಅಂಬುಲೆನ್ಸ್‌ಗಳು ಲಭ್ಯವಿಲ್ಲದ ಕಾರಣ ರೋಗಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಕೆಲವೊಮ್ಮೆ ಸಕಾಲಕ್ಕೆ ಆಸ್ಪತ್ರೆ ತಲುಪದೆ ಮಾರ್ಗಮಧ್ಯೆ ಮೃತಪಟ್ಟ ಉದಾಹರಣೆಗಳಿವೆ.
ತಾಲ್ಲೂಕಿನ ಕಿಬ್ಬನಹಳ್ಳಿಯಿಂದ ಕೊನೇಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ ಗುಂಡಿಗಳು ಹೆಚ್ಚಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
108’ಕ್ಕೆ ಕರೆಮಾಡಿದರೆ ತಿಪಟೂರಿನ ಅಂಬುಲೆನ್ಸ್‌ಗಳು ದುರಸ್ತಿಯಲ್ಲಿವೆ. ಬೇರೆ ತಾಲ್ಲೂಕು ಕೇಂದ್ರದಿಂದ ಕಳುಹಿಸುತ್ತೇವೆ. ಸ್ವಲ್ಪ ಸಮಯ ಕಾಯಬೇಕು ಎಂಬ ಉತ್ತರ ಸಿಗುತ್ತದೆ. ಆಗ ಹತ್ತಿರದ ಆಟೊ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಕಾಳಜಿ ವಹಿಸುತ್ತಾರಾ ಎಂದು ಕಾದುನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC