ಹುಳಿಯಾರು: ನೀವೆಲ್ಲಾ ಮನೆಯಲ್ಲಿ ಬೆಚ್ಚಗೆ ಇದ್ದು, ರೈತರನ್ನು ಮನೆಮಠ ಬಿಟ್ಟು ಅಹೋರಾತ್ರಿ ಧರಣಿ ಕೂರುವಂತೆ ಮಾಡಿದ್ದೀರಲ್ಲಾ, ಇದೇ ಏನು ರೈತರಿಗೆ ನೀವು ಕೊಡುವ ಗೌರವ? ರೈತರೇನು ಮಹಾ ಕೇಳಬಾರದನ್ನು ಕೇಳಿದ್ದಾರೆ ಹೇಳಿ, ಸಂತೆಗೆ ಜಾಗ ಕೊಡಿ, ನೀರು, ಶೌಚಾಲಯ ಕೊಡಿ ಎಂದು ಕೇಳಿದ್ದಾರೆ. ಅಷ್ಟೆ, ಇಷ್ಟನ್ನೂ ಕೊಡದೆ ಮಳೆಗಾಲ, ಸಿಡಿಲುಗುಡುಗಿನ ಮಧ್ಯೆ ಕಾಲ ಕಳೆಯುವಂತೆ ಮಾಡಿದ್ದೀರಲ್ಲಾ, ಅವರ ಶಾಪ ನಿಮಗೆ ತಟ್ಟದೆ ಇರದು. ಮೊದಲು ಎಚ್ಚೆತ್ತುಕೊಂಡು ಅವರ ಕೆಲಸ ಮಾಡಿ ಕೊಡಿ ಎಂದು ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಎಚ್ಚರಿಸಿದರು.
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಸಂತೆ ಮೈದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 13 ನೇ ದಿನ ಪೂರೈಸಿದೆ. ಈ ದಿನ ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಧರಣಿಯಲ್ಲಿ ಕುಳಿತು ಬೆಂಬಲ ಸೂಚಿಸಿ ಮಾತನಾಡಿದರು.
ಹುಳಿಯಾರಿನ ಉಪಮಾರುಕಟ್ಟೆಯಾದ ಚಿಕ್ಕನಾಯಕನಹಳ್ಳಿಯಲ್ಲೇ ಎಪಿಎಂಸಿಯಲ್ಲಿ ಸಂತೆ ನಡೆಯುತ್ತಿರುವಾಗ ಮುಖ ಮಾರುಕಟ್ಟೆಯಾಗಿರುವ ಹುಳಿಯಾರಿನ ಎಪಿಎಂಸಿಯಲ್ಲಿ ಏಕೆ ಸಂತೆ ನಡೆಯಬಾರದು, ಚಿಕ್ಕನಾಯಕನಹಳ್ಳಿಗೆ ಇರದ ಕಾನೂನಿನ ಅಡೆತಡೆ ಹುಳಿಯಾರಿಗೆ ಏಕೆ ಎಂದು ಪ್ರಶ್ನಿಸಿದರು.
ನಮಗೇನು ತಿಳಿಯುವುದಿಲ್ಲ. ನಮಗೊಂದಿಷ್ಟು ಒಳ್ಳೆಯದನ್ನು ಮಾಡಿ, ಓದಿರುವ ನಿಮಗೆ ಜನರು ತಾವು ಕಟ್ಟುವ ಟ್ಯಾಕ್ಸ್ ನಲ್ಲಿ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಆದರೆ ಕೊಬ್ಬರಿ ಖರೀದಿ ಕೇಂದ್ರ ತೆರೆಯಲೂ ಹೋರಾಟ ಮಾಡಬೇಕು. ರಾಗಿ ಖರೀದಿ ಕೇಂದ್ರಕ್ಕೂ ಹೋರಾಟ ಮಾಡಬೇಕು. ಮಾರಿದ ನಂತರ ದುಡ್ಡು ಪಡೆಯಲೂ ಹೋರಾಟ ಮಾಡಬೇಕು. ಹೀಗಿರುವಾಗ ನಿಮ್ಮಗಳ ಅಗತ್ಯವಾದರೂ ಏಕೆಬೇಕಿತ್ತು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.
ಚುನಾವಣೆಗಳು ಬಂದಾಗ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ನಾವೂ ಸಹ ರೈತನ ಮಕ್ಕಳೇ ಎನ್ನುತ್ತಾರೆ. ಮತಕೇಳುವಾಗ ಕಣಕ್ಕೆ ಹೋಗಿ ರೈತರ ಜೊತೆ ಕೆಲಸ ಮಾಡಿ ಓಟು ಕೇಳುತ್ತಾರೆ. ಗೆದ್ದ ನಂತರ ರೈತರ ಬೆನ್ನು ಮೂಳೆ ಮುರಿಯುತ್ತಾರೆ. ಇದಕ್ಕೆ ಹುಳಿಯಾರಿನಲ್ಲಿ 13 ದಿನಗಳ ಕಳೆದರೂ ರೈತನ ಬೇಡಿಕೆಗೆ ಸ್ಪಂದಿಸದೆ ಧರಣಿ ಮುಂದುವರೆಸುತ್ತಿರುವುದು ನಿದರ್ಶನವಾಗಿದೆ. ಈಗ ಜನರು ಬುದ್ದಿವಂತರಾಗಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜನಪ್ರತಿನಧಿಗಳನ್ನು ಚುಚ್ಚಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಟಿ.ಎಸ್.ಪ್ರಶಾಂತ್, ಮಲ್ಲೇಶಣ್ಣ, ನೀರಾ ಈರಣ್ಣ, ಓಂಕಾರಮ್ಮ, ಟಿ.ಎನ್ .ಶಿವಣ್ಣ, ಎನ್.ಜಿ.ರೇವಣ್ಣ, ಎಂ.ಶ್ರೀನಿವಾಸ್, ಎಚ್.ಪಿ.ಮಂಜುನಾಥ್, ಪುಟ್ಟಯ್ಯ, ಹೂವಿನತಿಮ್ಮಣ್ಣ, ಸದ್ದಾಬೋವಿ, ದುರ್ಗಾರಾಜು, ಲಕ್ಷ್ಮೀ, ಹನುಮಂತರಾಜ್ ಅರಸ್, ಮಂಜುನಾಥ್, ಶ್ರೀನಿವಾಸ್, ಶ್ರೀಧರ್, ಗಂಗಾಧರಯ್ಯ, ಸೇರಿದಂತೆ ಅನೇಕರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC