ತುಮಕೂರು: ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯರನ್ನು ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ಅಂತರರಾಜ್ಯ ಕಳ್ಳನನ್ನು ವೈ.ಎನ್. ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಅನಂತಪುರ ಜಿಲ್ಲೆ ರಾಯದುರ್ಗ ಮಂಡಲದ ಸೋಮಲದೊಡ್ಡಿ ಗ್ರಾಮದ ಬಂಡಿಸುಬ್ರಹ್ಮಣ್ಯಂ (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 3.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಸೂಲನಾಯಕನಹಳ್ಳಿ ಗೇಟ್‌ನಿಂದ ನವೆಂಬರ್ 23 ರಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಹಾಗೂ ಡಿಸೆಂಬರ್ 8 ರಂದು ಪಳವಳ್ಳಿ ಕಟ್ಟೆಯ ಬಳಿ ಬಸ್‌ಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ಎಂಬುವವರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ, ಜಮೀನೊಂದರ ಬಳಿ ಆಕೆಯನ್ನು ಕರೆದುಕೊಂಡು ಹೋಗಿ, ಚಿನ್ನದ ಒಡವೆ ಬಿಚ್ಚಿಸಿಕೊಂಡು, ಕಿವಿಯಲ್ಲಿನ ಓಲೆ ಕಿತ್ತಿದ್ದನು. ಗುಂಡಮ್ಮ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರದಲ್ಲಿ ಅರ್ಧ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಟ್ಟಣದ ಕಲ್ಯಾಣದುರ್ಗ ರಸ್ತೆಯ ಪಕ್ಕ ನೆಲೆದಿಗಲ ಬಂಡೆ ಕ್ರಾಸ್ ಬಳಿಯ ಬಸ್ ಶೆಲ್ಟರ್ ಬಳಿ ನಿಂತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಸದರಿ ಆರೋಪಿ ಕದ್ದಿದ್ದ ಚಿನ್ನಾಭರಣಗಳನ್ನು ಕಲ್ಯಾಣ ದುರ್ಗದ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ. ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ದೊಡ್ಡಬಳ್ಳಾಪುರದಲ್ಲಿ ಕಳ್ಳತನ ಮಾಡಿದ್ದ. ಪಟ್ಟಣ ಠಾಣಾ ವ್ಯಾಪ್ತಿಯ ವೀರಮ್ಮ ನಹಳ್ಳಿ ಗೇಟ್ ಬಳಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


