ಮಧುಗಿರಿ: ಪಟ್ಟಣದ ಎಂ.ಎಸ್.ರಾಮಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ನಡೆಯಬೇಕಿದ್ದ ಬಾಲ್ಯ ವಿವಾಹವೊಂದು ಪೊಲೀಸರ ಎಂಟ್ರಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಆದರೆ, ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ವಧು ಮತ್ತು ವರ ಇಬ್ಬರೂ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಪಟ್ಟಣದ ಕರಡಿಪುರ ನಿವಾಸಿಯಾದ ಯುವತಿ ಹಾಗೂ ಆಂಧ್ರಪ್ರದೇಶ ಮೂಲದ ಯುವಕನಿಗೆ ಹಿರಿಯರು ಮಾರ್ಚ್ 7 ಮತ್ತು 8 ರಂದು ವಿವಾಹ ನಿಶ್ಚಯಿಸಿದ್ದರು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ಈ ನಡುವೆ, ವಧುವಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂಬ ವಿಷಯ ತಿಳಿದ ಯಾರೋ ಅಪರಿಚಿತರು 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ದೂರು ಬಂದ ತಕ್ಷಣ ಮಧುಗಿರಿ ಪೊಲೀಸರು ಕಲ್ಯಾಣ ಮಂಟಪಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗುವಷ್ಟರಲ್ಲಿ ವಧು ಮತ್ತು ವರ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದರು. ಪರಿಶೀಲನೆಯಲ್ಲಿ ವಧುವಿಗೆ 18 ವರ್ಷ ಪೂರ್ಣಗೊಳ್ಳಲು ಇನ್ನು ಕೇವಲ ಮೂರು ತಿಂಗಳು ಬಾಕಿ ಇರುವುದು ದೃಢಪಟ್ಟಿದೆ.
ಕಾನೂನುಬದ್ಧವಾಗಿ ಮದುವೆಯಾಗಲು ಯುವತಿಗೆ 18 ವರ್ಷ ತುಂಬುವುದು ಕಡ್ಡಾಯ. ವಯಸ್ಸಿನ ದಾಖಲೆಗಳ ಪ್ರಕಾರ ಯುವತಿ ಅಪ್ರಾಪ್ತೆಯಾಗಿದ್ದರಿಂದ ಈ ವಿವಾಹವನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಸ್ಥಗಿತಗೊಳಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ಜೋಡಿಗಾಗಿ ಹುಡುಕಾಟ ನಡೆದಿದ್ದು, ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


