ತುಮಕೂರು: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳು, ಸಂರಕ್ಷಣೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಮಾ.10 ರಂದು ಪೌರಾಡಳಿತ ನಿರ್ದೇಶನಾಲಯದಿಂದ ಈ ಸುತ್ತೋಲೆ ಹೊರಬಂದಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಸಲ್ಲಿಸಿದ್ದ ಶಿಫಾರಸುಗಳನ್ನು ಪರಿಗಣಿಸಿ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ.
ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ 10 ವರ್ಷಗಳ ವಯಸ್ಸಿನ ಮಕ್ಕಳ ಸಂಖ್ಯೆ, ಶಾಲಾ ದಾಖಲಾತಿ, ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ ಕಾರ್ಮಿಕತೆ, ವಿಶೇಷ ಅವಶ್ಯಕತೆ ಇರುವ ಮಕ್ಕಳು, ಸಂಕಷ್ಟದಲ್ಲಿರುವ ಮಕ್ಕಳು ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವಾರ್ಡ್ ಮಟ್ಟದ ಮಕ್ಕಳ ಸ್ಥಿತಿಗತಿ ವರದಿ ತಯಾರಿಸಬೇಕು. ಪ್ರತಿ ಸ್ಥಳೀಯ ಆಡಳಿತದಲ್ಲಿ ಅಧ್ಯಕ್ಷರು, ಮೇಯರ್ ಅವರ ಅಧ್ಯಕ್ಷತೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಬೇಕು. ಸಮಿತಿಯಲ್ಲಿ ಆಯ್ಕೆಯಾದ ಸದಸ್ಯರು ಸಂಬಂಧಿತ ಅಧಿಕಾರಿಗಳು, ಸಮಾಜ ಸೇವಕರು ಹಾಗೂ ಮಕ್ಕಳ ಪ್ರತಿನಿಧಿಗಳನ್ನು ಒಳಗೊಂಡಿರಬೇಕು. ಸಮಿತಿಯು ಸಭೆಯಲ್ಲಿ ಈ ಕೆಳಕಂಡ ವಿಷಯಗಳ ಕುರಿತು ಚರ್ಚಿಸಿ ಗುರಿ ಸಾಧಿಸಬೇಕು ಎಂದು ತಿಳಿಸಿದೆ.
ಎಲ್ಲಾ ಮಕ್ಕಳ ಶೇ.100 ರಷ್ಟು ಜನನ ಪ್ರಮಾಣ ಪತ್ರ ನೋಂದಣಿ ಮತ್ತು ವಿತರಣೆ, ರೋಗ ನಿರೋಧಕ ಚುಚ್ಚುಮದ್ದು ಖಾತರಿಪಡಿಸಿಕೊಳ್ಳುವುದು, ಅಂಗನವಾಡಿಯಲ್ಲಿ ಶೇ.100 ರಷ್ಟು ಹಾಜರಾತಿ ಖಾತರಿಪಡಿಸಿಕೊಳ್ಳುವುದು, 10ನೇ ತರಗತಿಯಲ್ಲಿ ಶೇ.100 ರಂತೆ ಹಾಜರಾತಿ ಖಾತರಿಪಡಿಸಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಶೂನ್ಯಗೊಳಿಸುವುದು, ಬಾಲ್ಯ ವಿವಾಹಗಳನ್ನು ಶೂನ್ಯಗೊಳಿಸುವಿಕೆ, ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟುವುದು, ಬೀದಿಬದಿ ಭಿಕ್ಷಾಟನೆ ತಡೆಯುವುದು, ಮಕ್ಕಳ ಕಾಣೆ ಪ್ರಕರಣಗಳನ್ನು ತಡೆಯುವುದು ಹೀಗೆ ಒಟ್ಟು 16 ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


