ವರದಿ: ಹಾದನೂರು ಚಂದ್ರ
ಸರಗೂರು (ಮೈಸೂರು): ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಗ್ರಾಮೀಣ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ರಸ್ತೆ ಅಭಿವೃದ್ಧಿಯಿಂದ ಸುಗಮ ಸಂಚಾರ ಸಾಧ್ಯವಾಗಿದ್ದು, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಗಳು:
ದಶಕಗಳಿಂದ ಮಳೆಗಾಲದಲ್ಲಿ ಕೆಸರು ಹಾಗೂ ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಿಂದ ಕಂಗಾಲಾಗಿದ್ದ ಗ್ರಾಮಸ್ಥರಿಗೆ ಇದೀಗ ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿರುವುದು ನೆಮ್ಮದಿ ತಂದಿದೆ.
• ಬಿದರಹಳ್ಳಿ–ಎನ್. ಬೇಗೂರು ಸಂಪರ್ಕ ರಸ್ತೆ: ಡಾಂಬರೀಕರಣಗೊಳ್ಳುತ್ತಿರುವುದರಿಂದ ಹಳ್ಳಿಗಳ ನಡುವಿನ ಸಂಪರ್ಕ ವ್ಯವಸ್ಥೆ ಸುಧಾರಿಸಿದೆ.
• ಭೀಮನಕೊಲ್ಲಿ ದೇವಸ್ಥಾನ ರಸ್ತೆ: ರಸ್ತೆ ಅಭಿವೃದ್ಧಿಯಿಂದ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ತೆರಳಲು ಅನುಕೂಲವಾಗಿದೆ.
• ಮಾದಾಪುರ – ಕೆ. ಬೆಳತ್ತೂರು ಹಾಗೂ ಲಂಕೆ ರಸ್ತೆ: ರಸ್ತೆಗಳು ಸುಸ್ಥಿತಿಗೆ ಬಂದಿದ್ದು, ನಿತ್ಯ ಸಂಚಾರ ನಡೆಸುವ ಸಾರ್ವಜನಿಕರಿಗೆ ಮಳೆಗಾಲದಲ್ಲೂ ಸುಗಮ ಸಂಚಾರ ಸಾಧ್ಯವಾಗಲಿದೆ.
• ಮುತ್ತಿಗೆಹುಂಡಿ – ಚಿಕ್ಕಬರಗಿ ರಸ್ತೆ: ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.
ಪ್ರಮುಖ ಅನುಕೂಲಗಳು: ಕೃಷಿ ಉತ್ಪನ್ನಗಳ ಸರಾಗ ಸಾಗಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷಿತ ಸಂಚಾರ, ತುರ್ತು ವೈದ್ಯಕೀಯ ಸೇವೆ ಹಾಗೂ ವ್ಯಾಪಾರ-ವಹಿವಾಟಿಗೆ ಹೆಚ್ಚಿನ ಬೆಂಬಲ ಸಿಗಲಿದೆ.
ಶಾಲೆ-ಕಾಲೇಜು ಹಾಗೂ ಸಮುದಾಯ ಭವನಗಳ ಮಂಜೂರು:
ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲೆ-ಕಾಲೇಜು ಕಟ್ಟಡಗಳ ನಿರ್ಮಾಣ ಹಾಗೂ ವಿವಿಧ ಸಮುದಾಯಗಳ ಜನರಿಗೆ ಅನುಕೂಲವಾಗುವಂತೆ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಆದ್ಯತೆ ನೀಡಿದ್ದಾರೆ. ಅನೇಕ ಕಾಮಗಾರಿಗಳು ಉದ್ಘಾಟನೆಗೊಂಡಿದ್ದು, ಉಳಿದ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ.
“ನಮ್ಮ ಗ್ರಾಮದ ರಸ್ತೆ ಡಾಂಬರೀಕರಣಗೊಂಡಿರುವುದರಿಂದ ಸಂಚಾರ ಬಹಳ ಸುಗಮವಾಗಿದೆ. ಹಿಂದೆ ಮಳೆ ಬಂದಾಗ ತುಂಬಾ ತೊಂದರೆಯಾಗುತ್ತಿತ್ತು. ಈಗ ವಿದ್ಯಾರ್ಥಿಗಳು ಹಾಗೂ ರೈತರು ಯಾವುದೇ ಸಮಸ್ಯೆಯಿಲ್ಲದೆ ಸಂಚರಿಸುತ್ತಿದ್ದಾರೆ. ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು.”
— ಶಿವರಾಜು ಕಂದೇಗಾಲ, ಯೂತ್ ಕಾಂಗ್ರೆಸ್ ಅಧ್ಯಕ್ಷ (ಎಚ್.ಡಿ. ಕೋಟೆ ಮತ್ತು ಸರಗೂರು)
“ರಸ್ತೆ ಅಭಿವೃದ್ಧಿಯಿಂದ ಗ್ರಾಮಕ್ಕೆ ಉತ್ತಮ ಸಂಪರ್ಕ ಸಿಕ್ಕಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ಹಾಗೂ ಪಟ್ಟಣಕ್ಕೆ ಬೇಗ ತಲುಪಲು ಸಾಧ್ಯವಾಗುತ್ತಿದೆ. ಸಮುದಾಯ ಭವನಗಳ ಮಂಜೂರಾತಿ ಶ್ಲಾಘನೀಯ.”
— ಬಸವರಾಜು ಕಳಸೂರು, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ“ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸರ್ಕಾರದ ಅನುದಾನ ತಂದು ಉಳಿದ ರಸ್ತೆಗಳನ್ನೂ ಶೀಘ್ರವೇ ಪೂರ್ಣಗೊಳಿಸುತ್ತೇವೆ.”
— ಅನೀಲ್ ಚಿಕ್ಕಮಾದು, ಶಾಸಕರು
“ಸರ್ಕಾರದ ನಿಯಮಾವಳಿ ಮತ್ತು ನಿಗದಿತ ಮಾನದಂಡಗಳಂತೆ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಉತ್ತಮ ರಸ್ತೆ ಒದಗಿಸಲು ಇಲಾಖೆ ಬದ್ಧವಾಗಿದೆ.”
— ರಮೇಶ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು (PWD, ಎಚ್.ಡಿ. ಕೋಟೆ ಮತ್ತು ಸರಗೂರು)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
