ಬೀದರ್: ತಾಲ್ಲೂಕಿನ ಜನವಾಡಾ ಬಳಿ ಇರುವ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ (ಎನ್ಎಸ್ಎಸ್ಕೆ) ಬಡ್ಡಿ ಮನ್ನಾ ಮಾಡಿ, ಮೂಲ ಸಾಲದ ಮೊತ್ತವನ್ನು ಮರುಪಾವತಿಸಲು ಏಕಕಾಲಿಕ ಸಾಲ ತಿರುವಳಿ (OTS) ಯೋಜನೆಯಡಿ ಅವಕಾಶ ಕಲ್ಪಿಸುವಂತೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಮನವಿ ಸಲ್ಲಿಸಿದ್ದಾರೆ.
ಅಪೆಕ್ಸ್ ಬ್ಯಾಂಕಿನ ಸುಸ್ತಿ ಸಾಲದ ಬಡ್ಡಿ ದರ ಪುನರ್ ನಿಗದಿ ಯೋಜನೆಯಡಿ ಬೀದರ್ ತಾಲ್ಲೂಕಿನ ಬರೂರು ಗ್ರಾಮದ ಭವಾನಿ ಸಕ್ಕರೆ ಕಾರ್ಖಾನೆಯ ಬಡ್ಡಿ ಮನ್ನಾ ಮಾಡಿರುವುದನ್ನು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದೇ ಮಾದರಿಯಲ್ಲಿ ನಾರಂಜಾ ಕಾರ್ಖಾನೆಯನ್ನೂ ಪರಿಗಣಿಸಿ, ಸಂಪೂರ್ಣ ಬಡ್ಡಿ ಮನ್ನಾ ಮಾಡಿ ಸಾಲದ ಹೊರೆಯಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಟ್ಟ ಸಾಲ, ಅನುಮಾನಾಸ್ಪದ ಸಾಲ ಹಾಗೂ ಕಾನೂನು ತೊಡಕುಗಳಿಂದ ವಸೂಲಾಗದ ಪ್ರಕರಣಗಳಿಗೂ ಈ ಯೋಜನೆ ಅನ್ವಯವಾಗುವುದರಿಂದ, ಒಟಿಎಸ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಾರ್ಖಾನೆ ಸಂಪೂರ್ಣ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ಡಿಸಿಸಿ ಬ್ಯಾಂಕಿನಿಂದ ಪಡೆದಿದ್ದ ₹57.90 ಕೋಟಿ ಸಾಲವು ಬಡ್ಡಿ ದುಪ್ಪಟ್ಟಾಗಿ ಹಂತ ಹಂತವಾಗಿ ₹668 ಕೋಟಿಗೆ ಏರಿಕೆಯಾಗಿದೆ. ಕಬ್ಬಿಗೆ ಎಫ್ಆರ್ಪಿ ದರಕ್ಕಿಂತ ಅಧಿಕ ಬೆಲೆ ಪಾವತಿಸಿದ್ದರಿಂದ ₹288 ಕೋಟಿ ನಷ್ಟವಾಗಿದೆ. ಜತೆಗೆ ಸಕ್ಕರೆ ವಿತರಣೆ ಮತ್ತು ಯಂತ್ರೋಪಕರಣಗಳ ಸವಕಳಿಯಿಂದ ನಷ್ಟದ ಪ್ರಮಾಣ ಹೆಚ್ಚಿದೆ. ನಿರಂತರ ನಷ್ಟ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕಾರ್ಖಾನೆಯು ಪಾವತಿಸಬೇಕಾದ ತೆರಿಗೆಗಳನ್ನು ಕಾಲಕಾಲಕ್ಕೆ ತಪ್ಪದೇ ಭರಿಸುತ್ತಾ ಬಂದಿದೆ ಎಂದು ಸೂರ್ಯಕಾಂತ್ ಮಾಹಿತಿ ನೀಡಿದ್ದಾರೆ.
ಸಹಕಾರಿ ಕ್ಷೇತ್ರದ ಸಂಸ್ಥೆಗಳ ಪುನಶ್ಚೇತನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರವು ನೀಡಿರುವ ಹಲವಾರು ನಿದರ್ಶನಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ವಿಜಯಪುರದ ನಂದಿ, ಬೈಲಹೊಂಗಲದ ಮಲಪ್ರಭಾ, ವಿಜಯಪುರದ ಭೀಮಾಶಂಕರ, ಬೆಳಗಾವಿಯ ಸಂಗಮ ಹಾಗೂ ಬೀದರ್ನ ಹುಮನಾಬಾದ್ ಸಕ್ಕರೆ ಕಾರ್ಖಾನೆಗಳು ರಾಜ್ಯ ಸರ್ಕಾರದ ಖಾತರಿ ನೆರವು ಪಡೆದಿವೆ. ಗದಗ ಜಿಲ್ಲೆಯ ಸೋಮೇಶ್ವರ ಫಾರ್ಮರ್ಸ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್ ಸಂಸ್ಥೆಯ ಬಡ್ಡಿಯನ್ನು ಏಕಕಾಲಿಕ ತಿರುವಳಿ ಮೂಲಕ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಿದೆ. ಪಂಜಾಬ್, ಪಶ್ಚಿಮ ಬಂಗಾಳ, ಕೇರಳ ಮತ್ತು ಗುಜರಾತ್ ರಾಜ್ಯಗಳಲ್ಲೂ ಸಹಕಾರಿ ಸಂಸ್ಥೆಗಳ ಪುನಶ್ಚೇತನಕ್ಕೆ ನೆರವು ನೀಡಲಾಗಿದೆ.
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಹಲವು ತಿದ್ದುಪಡಿಗಳನ್ನು ಮಾಡಿದ್ದು, ಎನ್ಸಿಡಿಸಿಯಿಂದ ನೇರವಾಗಿ ಸಾಲ ಪಡೆಯಲು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಅವಕಾಶ ಬಳಸಿಕೊಳ್ಳಲು ಕೇಂದ್ರದೊಂದಿಗೆ ಪತ್ರವ್ಯವಹಾರ ಮುಂದುವರಿದಿದೆ ಎಂದಿದ್ದಾರೆ. ಸಹಕಾರಿ ಸಕ್ಕರೆ ವಲಯವು ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭವಾಗಿದ್ದು, ಕಬ್ಬು ಬೆಳೆಗಾರರಿಗೆ ಖಚಿತ ಮಾರುಕಟ್ಟೆ ಹಾಗೂ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಒದಗಿಸಿದೆ. ಬ್ಯಾಂಕ್ ಸಾಲದ ಬಡ್ಡಿ ಪೂರ್ಣ ಮನ್ನಾ ಮಾಡಿ ಒಟಿಎಸ್ ಯೋಜನೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವುದರಿಂದ ರೈತರು, ಬ್ಯಾಂಕ್ ಹಾಗೂ ಕಾರ್ಖಾನೆಯ ಸಿಬ್ಬಂದಿಗೆ ದೊಡ್ಡ ರಕ್ಷಣೆ ಸಿಕ್ಕಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
