ತುಮಕೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ಹಾಗೂ ಚಿಕಿತ್ಸಾ ವಿಧಾನಗಳು ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು, ಈ ಪ್ರಗತಿಗೆ ಆಧುನಿಕ ಯಂತ್ರೋಪಕರಣಗಳೇ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ರಾಘವೇಂದ್ರ ನಗರದಲ್ಲಿ (ಕೈಲಾಸ ಆಶ್ರಮದ ಪಕ್ಕದಲ್ಲಿ) ನೂತನವಾಗಿ ತಲೆಎತ್ತಿರುವ ‘ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆಯನ್ನು ಸೆಪ್ಟೆಂಬರ್ 18 ರಂದು ಅವರು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಈ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ತಪಾಸಣೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವಿಶೇಷ ವೈದ್ಯಕೀಯ ಸೇವೆಗಳು ಇಲ್ಲಿ ಲಭ್ಯವಿವೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಯಶವಂತ್ ಗಂಗಯ್ಯ ಮಾತನಾಡಿ, ಈ ಅತ್ಯಾಧುನಿಕ ಚಿಕಿತ್ಸೆಯು ತುಮಕೂರು ಜಿಲ್ಲೆಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಎಂದರು. ಕಿಡ್ನಿ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ದೊರೆಯುವಂತೆ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆಸ್ಪತ್ರೆ ಆದ್ಯತೆ ನೀಡಲಿದೆ ಎಂದು ಅವರು ವಿವರಿಸಿದರು.
ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರ ಸೇವೆ ಲಭ್ಯವಿದ್ದು, ಮೂತ್ರಪಿಂಡ ವೈದ್ಯಕೀಯ (ನೆಫ್ರಾಲಜಿ), ಮೂತ್ರಶಾಸ್ತ್ರ (ಯುರಾಲಜಿ), ಹೃದಯ ವೈದ್ಯಕೀಯ (ಕಾರ್ಡಿಯಾಲಜಿ), ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆ, ಕ್ಯಾನ್ಸರ್ ಆರೈಕೆ ಮತ್ತು ಕ್ಲಿನಿಕಲ್ ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ವಿಭಾಗ, ಮಧುಮೇಹ ಮತ್ತು ಅಂತಃಸ್ರಾವ ಗ್ರಂಥಿ ವೈದ್ಯಕೀಯ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ, ಮಹಿಳೆಯರ ಆರೋಗ್ಯ ಸೇವೆಗಳು, ಮಕ್ಕಳ ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆ ಲಭ್ಯವಿದೆ. ಇದರೊಂದಿಗೆ ಶ್ವಾಸಕೋಶ ಮತ್ತು ಉಸಿರಾಟದ ವೈದ್ಯಕೀಯ, ಚರ್ಮರೋಗ ಚಿಕಿತ್ಸಾ ವಿಭಾಗ, ಮನೋವೈದ್ಯಕೀಯ, ನೇತ್ರ ಚಿಕಿತ್ಸಾ ವಿಭಾಗ, ಜಠರ ಮತ್ತು ಅಂತರಾಂಗ ವೈದ್ಯಕೀಯ, ಸಂಧಿವಾತ ಚಿಕಿತ್ಸಾ ವಿಭಾಗ ಹಾಗೂ ಇಎನ್ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗ ಸೇರಿದಂತೆ ಹತ್ತು ಹಲವು ಅತ್ಯುತ್ತಮ ಸೇವೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ಲಭ್ಯವಿರಲಿವೆ.
ಮುದ್ರಣ ಇಲಾಖೆಯ ನಿವೃತ್ತ ಅಧಿಕಾರಿ ಗಂಗಯ್ಯ ಮಾತನಾಡಿ, ಆಧುನಿಕ ತಂತ್ರಜ್ಞಾನದ ಉಪಕರಣಗಳ ಬಳಕೆಯೊಂದಿಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಈ ಆಸ್ಪತ್ರೆ ನೆರವಾಗಲಿದೆ ಎಂದರು. ಡಾ. ನಳಿನಿ ಯಶವಂತ್ ಮಾತನಾಡಿ, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳೊಂದಿಗೆ ವಿವಿಧ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ನೀಡುವುದು ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಲಭ್ಯವಾಗಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ, ವಿಧಾನ ಪರಿಷತ್ ಸದಸ್ಯ ಶಿವಣ್ಣ, ಡಾ. ನಳಿನಿ ಯಶವಂತ್ ಸೇರಿದಂತೆ ತುಮಕೂರಿನ ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ ಸಿ.ಜಿ. ಕಿಡ್ನಿಕೇರ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
