ಕೊರಟಗೆರೆ: ತುಮಕೂರು ಜಿಲ್ಲೆಯ ಮಧುಗಿರಿಯನ್ನು ಇತ್ತೀಚೆಗೆ ಕೆಎಸ್ ಆರ್ ಟಿಸಿ ಉಪವಿಭಾಗವನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಕೊರಟಗೆರೆ ತಾಲೂಕಿಗೂ ಹೊಸ ಕೆಎಸ್ ಆರ್ ಟಿಸಿ ಉಪವಿಭಾಗ ಮಂಜೂರಾಗುವ ಮೂಲಕ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ವಿಶೇಷ ಮುತುವರ್ಜಿ ಮತ್ತು ಆದೇಶದ ಮೇರೆಗೆ ಕೊರಟಗೆರೆಯಲ್ಲಿ ನೂತನ ಉಪವಿಭಾಗ ಸ್ಥಾಪನೆಗೆ ಅಧಿಕೃತ ಪ್ರಕ್ರಿಯೆ ಭರದಿಂದ ಆರಂಭವಾಗಿದೆ.
ಈ ಯೋಜನೆಯ ಸ್ಥಳ ಪರಿಶೀಲನೆಗಾಗಿ ಕೊರಟಗೆರೆ ತಾಲೂಕು ಆಡಳಿತ ಕಾರ್ಯಪ್ರವೃತ್ತರಾಗಿದ್ದು, ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 60 ರಲ್ಲಿ ಸುಮಾರು 6 ಎಕರೆ ಸರ್ಕಾರಿ ಜಮೀನನ್ನು ಕೆಎಸ್‌ಆರ್‌ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ಖಚಿತಪಡಿಸಿದ್ದಾರೆ. ಈ ಜಾಗವು ಕೊರಟಗೆರೆ – ಮಧುಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ಡಿಪೋ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲೇ ಜಾಗದ ಪಹಣಿ ಹಾಗೂ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಈ ಉಪವಿಭಾಗ ನಿರ್ಮಾಣವಾದರೆ ಕೊರಟಗೆರೆ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರು ಭಾಗಗಳಿಗೆ ಹೆಚ್ಚಿನ ಸಾರಿಗೆ ಸಂಪರ್ಕ ಲಭ್ಯವಾಗಲಿದೆ. ಪ್ರಮುಖವಾಗಿ ಹುಲಿಕುಂಟೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರು, ರೈತರು, ಕಾರ್ಮಿಕರಿಗೆ ಇದು ಅತ್ಯಂತ ಅನುಕೂಲಕರವಾಗಲಿದೆ. ತಾಲೂಕಿನ ಸಾರಿಗೆ ಸಮಸ್ಯೆಗೆ ಸ್ಪಂದಿಸಿ ಕೆಎಸ್ ಆರ್ ಟಿಸಿ ಉಪವಿಭಾಗ ತಂದಿತ್ತ ಡಾ. ಜಿ. ಪರಮೇಶ್ವರ್ ಅವರ ಈ ಪ್ರಮುಖ ನಿರ್ಧಾರಕ್ಕೆ ಕೊರಟಗೆರೆ ತಾಲೂಕಿನ ಜನತೆ ಭಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
