ಕೊರಟಗೆರೆ: ಪಟ್ಟಣದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲ್ಲೂಕು ಪಂಚಾಯಿತಿ (ತಾ.ಪಂ.) ಕಟ್ಟಡದ ಕಾಮಗಾರಿ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಕಾಮಗಾರಿಯನ್ನು ವೀಕ್ಷಿಸಿ, ಈ ನೂತನ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿಯೇ ಅತಿ ಬೃಹತ್ ಆದ ಈ ಕಟ್ಟಡದಲ್ಲಿ ಯಾವುದೇ ಲೋಪದೋಷವಿಲ್ಲದೆ ಅತ್ಯುತ್ತಮ ಗುಣಮಟ್ಟದ ಕೆಲಸವಾಗಬೇಕು ಎಂದ ಅವರು, ಮುಳಬಾಗಿಲು ಮಾದರಿಯಲ್ಲಿ ತಾ.ಪಂ. ಕಟ್ಟಡ ಹಾಗೂ ಒಳಗಿನ ಸಭಾಂಗಣ ಯಾವುದೇ ಕೊರತೆ ಇಲ್ಲದೆ ನಿರ್ಮಾಣವಾಗಬೇಕು ಎಂದು ತಿಳಿಸಿದರು. ಈಗಾಗಲೇ 2 ಕೋಟಿ ಹಣ ಮಂಜೂರಾಗಿದ್ದು, ಉಳಿದ ಅನುದಾನವನ್ನು ಸರ್ಕಾರದಿಂದ ಆದಷ್ಟು ಬೇಗ ಬಿಡುಗಡೆ ಮಾಡಿಸಿ ಜಿಲ್ಲೆಗೆ ಮಾದರಿಯಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಊರ್ಡಿಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ನಂದಿನಿ ಹಾಲಿನ ಕೇಂದ್ರವನ್ನು ಉದ್ಘಾಟಿಸಿ ಬಾದಾಮಿ ಹಾಲನ್ನು ಸವಿದರು. ನಂದಿನಿ ಕರ್ನಾಟಕದಲ್ಲಿ ಉತ್ತಮ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದು, ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಊರ್ಡಿಗೆರೆಯಲ್ಲಿ 108 ಆಂಬ್ಯುಲೆನ್ಸ್ ವಾಹನದ ಸಮಸ್ಯೆ ಬಗ್ಗೆ ಕಾರ್ಯಕರ್ತರು ತಿಳಿಸಿದ ತಕ್ಷಣವೇ, ಡಿಎಚ್ ಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಆದಷ್ಟು ಬೇಗ 108 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಈ ವೇಳೆ ತುಮಕೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಎಸ್ಪಿ ಅಶೋಕ್, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ ಅನಂತರಾಮು, ಗುರುಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವಥ್ ನಾರಾಯಣ್, ಮಹಾಲಿಂಗಪ್ಪ, ವಿನಯ್ ಕುಮಾರ್, ಕಾರ್ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
