ಕೊರಟಗೆರೆ: ವಿಶ್ವಕರ್ಮ ಸಮಾಜವು ಕಲೆ, ಶಿಲ್ಪಕಲೆ ಮತ್ತು ಕರಕುಶಲತೆಗೆ ಹೆಸರಾದ ಶ್ರೀಮಂತ ಸಂಸ್ಕೃತಿಯ ಸಮಾಜವಾಗಿದ್ದು, ತನ್ನ ಅದ್ಭುತ ಕೌಶಲ್ಯದಿಂದ ಸಮಾಜದ ಬದುಕನ್ನು ಸುಂದರಗೊಳಿಸಿದೆ ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಗೂಟೂರು ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೊರಟಗೆರೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಜಯಂತಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರ ಕಲೆ ಮತ್ತು ಕೌಶಲ್ಯವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದ ಅವರು, ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಹಾಗೂ ರಾಜ್ಯ ಸರ್ಕಾರದ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯ ಯೋಜನೆಗಳು ಕುಶಲಕರ್ಮಿಗಳಿಗೆ ಹೊಸ ಭರವಸೆ ಮೂಡಿಸಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಯಾಂತ್ರೀಕರಣದ ಭರಾಟೆಯಲ್ಲಿ ಸಾಂಪ್ರದಾಯಿಕ ವೃತ್ತಿಗಳು ವೇಗವಾಗಿ ನೇಪಥ್ಯಕ್ಕೆ ಸರಿಯುತ್ತಿದ್ದು, ಕುಶಲಕರ್ಮಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕುಲಕಸುಬುಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಮಾರುಕಟ್ಟೆಯ ಸ್ಪರ್ಶ ನೀಡಿದಾಗ ಮಾತ್ರ ಸ್ಪರ್ಧಿಸಲು ಸಾಧ್ಯವಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಬೇಕು ಎಂದರು.
ಅರ್ಚಕ ಶ್ರೀಧರಾಚಾರ್ಯ ಮತ್ತು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರವೀಂದ್ರನಾಥ್ ಅವರು ಸಮುದಾಯ ಹಾಗೂ ಕುಶಲಕರ್ಮಿಗಳ ಇತಿಹಾಸದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಮಧುಸೂದನ್, ಕಂದಾಯ ಇಲಾಖೆಯ ವೆಂಕಟರಂಗನ್, ವೆಂಕಟೇಶಮೂರ್ತಿ, ಮಂಜುನಾಥ್, ಬಸವರಾಜು, ನಕುಲ್, ಪದ್ಮಿನಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರಾದ ವೀರಭದ್ರಚಾರ್, ನೀಲಕಂಠಾಚಾರ್, ಶ್ರೀಧರಚಾರ್, ತುಂಬಾಡಿ ಕೃಷ್ಣಚಾರ್, ನಾಗರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
