ತುಮಕೂರು: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ತುಮಕೂರು ನಗರದ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ.
ನಗರದ ಹೊರಪೇಟೆಯ ಪ್ರಸಿದ್ಧ ‘ಪ್ರಸಾದ್ ಹೋಟೆಲ್’ ಬುಧವಾರದಿಂದ ವಹಿವಾಟು ಸ್ಥಗಿತಗೊಳಿಸಿದೆ. ಪ್ರತಿ ದಿನ ಸುಮಾರು ಮೂರು ಸಿಲಿಂಡರ್ ಗಳ ಅಗತ್ಯವಿದ್ದರೂ, ಪೂರೈಕೆ ಇಲ್ಲದ ಕಾರಣ ಅನಿವಾರ್ಯವಾಗಿ ಬೀಗ ಹಾಕಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅನಿಲ ಸರಬರಾಜು ಕಡಿತಗೊಂಡಿದೆ. ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರೂ, ಹೊಸ ಬುಕಿಂಗ್‌ಗಳನ್ನು ಸ್ವೀಕರಿಸಲು ಏಜೆನ್ಸಿಗಳು ಹಿಂದೇಟು ಹಾಕುತ್ತಿವೆ. ಒಂದು ವೇಳೆ ಬುಕ್ ಮಾಡಿದರೂ ಸಿಲಿಂಡರ್ ಸಿಗಲು ಕನಿಷ್ಠ 15 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ.
ಕೆಲವು ಹೋಟೆಲ್ ಮಾಲೀಕರು ಸೌದೆ ಒಲೆಗಳನ್ನು ಬಳಸಲು ಮುಂದಾಗಿದ್ದರೂ, ಎಲ್ಲಾ ಖಾದ್ಯಗಳನ್ನು ಸೌದೆಯಲ್ಲಿ ತಯಾರಿಸುವುದು ಸವಾಲಾಗಿದೆ. ಇನ್ನು ಕೆಲವು ಹೋಟೆಲ್ ಗಳಲ್ಲಿ ಪೈಪ್‌ಲೈನ್ ಸಂಪರ್ಕ ಇರುವುದರಿಂದ ಸದ್ಯಕ್ಕೆ ತೊಂದರೆಯಾಗಿಲ್ಲ, ಆದರೆ ಮುಂದಿನ ದಿನಗಳಲ್ಲಿ ಅಲ್ಲಿಯೂ ಸಮಸ್ಯೆ ಎದುರಾಗುವ ಆತಂಕವಿದೆ.
ಮಾಲೀಕರ ಅಳಲು: “ಮಾರ್ಚ್ 10ರಿಂದ ವಾಣಿಜ್ಯ ಸಿಲಿಂಡರ್ ಪೂರೈಕೆ ಸಂಪೂರ್ಣ ನಿಂತಿದೆ. ಬೆಲೆ ಏರಿಕೆಯಾದರೂ ಸಹಿಸಿಕೊಳ್ಳಬಹುದು, ಆದರೆ ಸಿಲಿಂಡರ್ ಸಿಗದೇ ಹೋಟೆಲ್ ನಡೆಸುವುದು ಅಸಾಧ್ಯ,” ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ವಾಸುದೇವ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಗರದ ಸಣ್ಣ ಪುಟ್ಟ ಹೋಟೆಲ್ ಗಳು ಮತ್ತು ಫುಡ್ ಸ್ಟ್ರೀಟ್ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೋವಿಡ್ ನಂತರ ಚೇತರಿಸಿಕೊಳ್ಳುತ್ತಿದ್ದ ಹೋಟೆಲ್ ಉದ್ಯಮಕ್ಕೆ ಈಗ ಯುದ್ಧದ ನೆರಳು ಕಗ್ಗಂಟಾಗಿ ಪರಿಣಮಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


