ಲಂಡನ್: ಲಂಡನ್ ನ ರಸ್ತೆಯಲ್ಲಿ ಪಾನ್ ತಿಂದು ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಅಲ್ಲಿನ ನ್ಯಾಯಾಲಯ ಬರೋಬ್ಬರಿ 3.46 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಕ್ಷಿತ್ ಕುಮಾರ್ ಭದ್ರೆ ಪಟೇಲ್ (31) ಮತ್ತು ಹಿತೇಶ್ ಪಟೇಲ್ (32) ಎಂಬುವವರೇ ದಂಡಕ್ಕೊಳಗಾದ ವ್ಯಕ್ತಿಗಳು. ಇವರು ಲಂಡನ್ ನ ಬ್ರೆಂಟ್ ಬರೋ (Brent Borough) ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಪಾನ್ ತಿಂದು ಉಗುಳುತ್ತಿರುವುದು ಕಂಡುಬಂದಿತ್ತು. ಅಕ್ಷಿತ್ ಕುಮಾರ್ ಅವರು 2025ರ ಜೂನ್‌ನಲ್ಲಿ ಕಿಂಗ್ಸ್‌ಬರಿ ಮೆಟ್ರೋ ನಿಲ್ದಾಣದ ಬಳಿ ಮತ್ತು ಹಿತೇಶ್ ಪಟೇಲ್ ಅವರು ನಾರ್ತ್ ವೆಂಬ್ಲಿ ನಿಲ್ದಾಣದ ಬಳಿ ಈ ಕೃತ್ಯ ಎಸಗಿದ್ದರು.
ಆರಂಭದಲ್ಲಿ ಸ್ಥಳೀಯ ಅಧಿಕಾರಿಗಳು ಇಬ್ಬರಿಗೂ ತಲಾ £100 (ಸುಮಾರು 10,500 ರೂ.) ದಂಡ ವಿಧಿಸಿದ್ದರು. ಆದರೆ, ಇವರು ನಿಗದಿತ ಸಮಯದಲ್ಲಿ ದಂಡ ಪಾವತಿಸಲಿಲ್ಲ ಮತ್ತು ನ್ಯಾಯಾಲಯದ ವಿಚಾರಣೆಗೂ ಹಾಜರಾಗಲಿಲ್ಲ. ಇದರಿಂದ ಕೆರಳಿದ ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತು. ಅಂತಿಮವಾಗಿ ಇಬ್ಬರಿಗೂ ಸೇರಿ ಒಟ್ಟು £2,782 (ಸುಮಾರು 3.46 ಲಕ್ಷ ರೂ.) ದಂಡ ಪಾವತಿಸುವಂತೆ ಆದೇಶಿಸಿದೆ. ಅಂದರೆ ಒಬ್ಬರಿಗೆ ಸುಮಾರು 1.73 ಲಕ್ಷ ರೂ. ದಂಡ ಬಿದ್ದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರೆಂಟ್ ಕೌನ್ಸಿಲ್, “ನಮ್ಮ ರಸ್ತೆಗಳನ್ನು ಗಲೀಜು ಮಾಡುವವರ ವಿರುದ್ಧ ನಾವು ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದ್ದೇವೆ. ಪಾನ್ ಉಗುಳುವುದರಿಂದ ರಸ್ತೆಗಳ ಮೇಲೆ ಅಳಿಸಲಾಗದ ಕಲೆಗಳು ಉಂಟಾಗುತ್ತವೆ. ಇವುಗಳನ್ನು ಸ್ವಚ್ಛಗೊಳಿಸಲು ಕೌನ್ಸಿಲ್ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸಾರ್ವಜನಿಕ ಆಸ್ತಿ ಹಾಳು ಮಾಡುವವರನ್ನು ನಾವು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


