ಬೆಂಗಳೂರು: ಬಾಕಿ ಉಳಿಸಿಕೊಂಡಿದ್ದ ಸಂಬಳದ ಹಣವನ್ನು ಕೇಳಿದ್ದಕ್ಕೆ ವಾಟರ್ ಟ್ಯಾಂಕರ್ ಚಾಲಕನನ್ನು ಅಪಹರಿಸಿ, ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ಭೀಮಾನಗರ ಠಾಣೆ ಪೊಲೀಸರು ಟ್ಯಾಂಕರ್ ಮಾಲೀಕ ಶ್ರೀನಿವಾಸ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಚಾಲಕನನ್ನು ಮೋಹನ್ (30) ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡೂವರೆ ವರ್ಷಗಳಿಂದ ಶ್ರೀನಿವಾಸ್ ಬಳಿ ವಾಟರ್ ಟ್ಯಾಂಕರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಏಳು ತಿಂಗಳಿನಿಂದ ಮಾಲೀಕರು ಸಂಬಳ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಮೋಹನ್ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ತನಗೆ ಬರಬೇಕಿದ್ದ ಸುಮಾರು 2 ಲಕ್ಷ ರೂಪಾಯಿ ಬಾಕಿ ಸಂಬಳ ನೀಡುವಂತೆ ಕೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ನಡೆದಿತ್ತು.
ಇದೇ ದ್ವೇಷದ ಹಿನ್ನೆಲೆಯಲ್ಲಿ ನವೆಂಬರ್ 5ರಂದು ಶ್ರೀನಿವಾಸ್ ಸೇರಿದಂತೆ ನಾಲ್ವರು ಆರೋಪಿಗಳು ಮೋಹನ್ ಮನೆ ಬಳಿ ದಾಳಿ ನಡೆಸಿದ್ದಾರೆ. ಕಬ್ಬಿಣದ ರಾಡ್ ನಿಂದ ಮೋಹನ್ ತಲೆಗೆ ಬಲವಾಗಿ ಹೊಡೆದು, ಬಳಿಕ ಕಾರಿನಲ್ಲಿ ಬಲವಂತವಾಗಿ ಅಪಹರಿಸಿ ಬೇರೆಡೆಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ಮನಬಂದಂತೆ ಥಳಿಸಿ, ಮೋಹನ್ ಮೃತಪಟ್ಟಿರಬಹುದು ಎಂದು ಭಾವಿಸಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮೋಹನ್, ಪ್ರಜ್ಞೆ ಮರಳಿದ ಬಳಿಕ ತಾವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಜೀವನ್ ಭೀಮಾನಗರ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
